ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಆದ್ಯತೆ
ಕೋಲಾರ,ಜೂ,೧೨- ಶಿಕ್ಷಕರು ಎದುರಿಸುತ್ತಿರುವ ವೇತನ ತಾರತಮ್ಯ, ಜೆಓಸಿಯಿಂದ ವಿಲೀನಗೊಂಡು ಶಾಲಾ ಶಿಕ್ಷಣ ಇಲಾಖೆಗೆ ಬಂದಿರುವ ಶಿಕ್ಷಕರ ಹಳೆಯ ಸೇವೆ ಪರಿಗಣನೆ ಸೇರಿದಂತೆ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಬದ್ದತೆಯಿಂದ ಕೆಲಸ ಮಾಡುವುದಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ನೂತನ ಸದಸ್ಯ ಡಿ.ಟಿ.ಶ್ರೀನಿವಾಸ್ ಭರವಸೆ ನೀಡಿದರು.
ವಿಧಾನಪರಿಷತ್ ಆಯ್ಕೆಯಾದ ಹಿನ್ನಲೆಯಲ್ಲಿ ಕೆಆರ್.ಪುರಂನ ತಮ್ಮ ನಿವಾಸದಲ್ಲಿ ಜಿಲ್ಲಾ ವೃತ್ತಿಶಿಕ್ಷಕರ ಸಂಘದ ಖಜಾಂಚಿ ಟಿ.ಎ.ಪ್ರಕಾಶ್ ಬಾಬು, ಎನ್‌ಪಿಎಸ್ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ವಿ.ಅಶೋಕ್ ನೇತೃತ್ವದಲ್ಲಿ ಶ್ರೀನಿವಾಸಪುರ ತಾಲ್ಲೂಕಿನ ಶಿಕ್ಷಕರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
೭ನೇ ವೇತನ ಆಯೋಗದ ವರದಿ ಜಾರಿಗೆ ನಮ್ಮ ಸರ್ಕಾರ ಬದ್ದವಾಗಿದೆ, ಈಗಾಗಲೇ ಇದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದ ಅವರು, ಇದರ ಜತೆಗೆ ಎನ್‌ಪಿಎಸ್ ರದ್ದತಿ ಕುರಿತು ಕಳೆದ ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲೇ ಭರವಸೆ ನೀಡಿದ್ದು, ಅದರ ಜಾರಿಗೂ ಸರ್ಕಾರ ಕ್ರಮವಹಿಸಲಿದೆ ಎಂದು ತಿಳಿಸಿದರು.
ಶಿಕ್ಷಕರು ವೇತನ ತಾರತಮ್ಯ, ಬಡ್ತಿ ಸಮಸ್ಯೆ, ಕಾಲ್ಪನಿಕ ವೇತನ ಸಮಸ್ಯೆ, ಅನುದಾನ ರಹಿತ ಶಾಲೆಗಳ ಶಿಕ್ಷಕರು ಸೇವಾ ಅಭದ್ರತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಎಲ್ಲ ಸಮಸ್ಯೆಗಳನ್ನು ಒಮ್ಮೆಲೆ ಪರಿಹರಿಸಲು ಅಸಾಧ್ಯವಾದರೂ ಕೈಲಾದಷ್ಟು ಸಮಸ್ಯೆಗಳ ಪರಿಹಾರಕ್ಕೆ ಶಕ್ತಿ ಮೀರಿ ಶ್ರಮಿಸುವೆ ಎಂದರು.
ಜೆಒಸಿ ಕೋರ್ಸುಗಳನ್ನು ಮುಚ್ಚಿದ ನಂತರ ವಿವಿಧ ಇಲಾಖೆಗಳಿಗೆ ವಿಲೀನಗೊಂಡ ನೌಕರರು, ಶಿಕ್ಷಕರಿಗೆ ಅವರ ಸುಮಾರು ೨೦ ವರ್ಷಗಳಿಗೂ ಹೆಚ್ಚಿನ ಹಿಂದಿನಸೇವೆ ಸಿಗದ ಕಾರಣ ನಿವೃತ್ತಿ ಅಂಚಿನಲ್ಲಿ ಸಂಕಷ್ಟದಬದುಕು ಎದುರಿಸುವಂತಾಗಿದೆ ಎಂದು ಗಮನಕ್ಕೆ ತರಲಾಯಿತು.
ಇದಕ್ಕೆ ಸ್ಪಂದಿಸಿದ ಅವರು ಜೆಒಸಿಯಿಂದ ವಿಲೀನಗೊಂಡ ಸಿಬ್ಬಂದಿಯ ಕಷ್ಟದ ಅರಿವು ನನಗಿದೆ, ನಿಮ್ಮೊಂದಿಗೆ ಸದಾ ನಾನಿರುವ ಎಂದು ತಿಳಿಸಿ, ವಿಧಾನಪರಿಷತ್‌ಗೆ ಕಳೆದ ಬಾರಿ ಪದವೀಧರ ಕ್ಷೇತ್ರದಿಂದಲೇ ಆಯ್ಕೆ ಬಯಸಿದ್ದೆ, ಪಕ್ಷೇತರನಾಗಿ ಕಣಕ್ಕಿಳಿದು ಕಡಿಮೆ ಅಂತರದಲ್ಲಿ ಸೋಲುಂಡಿದ್ದೆ ಎಂದ ಅವರು, ಈ ಬಾರಿ ಶಿಕ್ಷಕರು ನನ್ನ ಕೈಬಿಡಲಿಲ್ಲ, ನನ್ನ ಗೆಲುವಿಗೆ ಪಕ್ಷದ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರು ಕೈಜೋಡಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಟಿ.ಎ.ಪ್ರಕಾಶ್‌ಬಾಬು, ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ವಿ.ಆಶೋಕ್, ಡಿಡಿಪಿಐ ಕಚೇರಿಯ ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ವೆಂಕಟೇಶಬಾಬು, ಶಿಕ್ಷಕ ಮುಖಂಡರಾದ ಮುಕುಂದ, ಅಪ್ಪೋರು ಮಂಜುನಾಥ್, ಶಿವರಾಜ್‌ಕುಮಾರ್, ಸಿಆರ್‌ಪಿ ಚನ್ನಪ್ಪ, ನಿವೃತ್ತ ಶಿಕ್ಷಕರ ಸಂಘದ ಅಧ್ಯಕ್ಷ ನಾಗರಾಜ್, ವೃತ್ತಿಶಿಕ್ಷಕ ಚಲಪತಿ, ಇಸಿಒ ಕೋದಂಡಪ್ಪ, ರವಿಕುಮಾರ್, ನಾಗರಾಜ್, ನಾರಾಯಣಸ್ವಾಮಿ, ಸಿಆರ್‌ಪಿಗಳಾದ ವೇಣುಗೋಪಾಲ್, ರಾಮಚಂದ್ರಪ್ಪ ಮತ್ತಿತರರಿದ್ದರು.