ಮಕ್ಕಳಲ್ಲಿ ಸಂಸ್ಕಾರದ ಜತೆಗೆ ಕಲಿಕೆಗೂ ಹೆಚ್ಚಿನ ಆಸಕ್ತಿ ಇರಲಿ
ಕೋಲಾರ,ಜೂ,೧೨:ಮಕ್ಕಳಿಗೆ ಕಲಿಕೆ ಜತೆಗೆ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ, ಓದಿನ ಜತೆ ಶಿಸ್ತುಬದ್ದ ಜೀವನದ ಪಾಠ ಮಕ್ಕಳಿಗೆ ನೀಡುತ್ತಿರುವ ಬೆಟ್ಟದ ತಪ್ಪಲಲ್ಲಿರುವ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಧನಾತ್ಮಕ ಶಕ್ತಿಯ ಸಂಚಲನವಿದೆ ಎಂದು ಶಾಹಿ ಎಕ್ಸ್‌ಪೋರ್ಟ್ಸ್‌ನ ನಿವೃತ್ತ ಜನರಲ್ ಮ್ಯಾನೇಜರ್ ಎಲ್.ರಘುರಾಜ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಮಕ್ಕಳಿಗೆ ತಮ್ಮ ನಿಸ್ವಾರ್ಥ ಸೇವೆಯ ಭಾಗವಾಗಿ ಪ್ರತಿವರ್ಷದಂತೆ ಈ ಬಾರಿಯೂ ಮಕ್ಕಳ ಕಲಿಕೆಗೆ ಕೊರತೆಯಾಗದ ರೀತಿ ನೋಟ್‌ಪುಸ್ತಕಗಳು, ಗಣಿತ ಕಲಿಕೆಗೆ ಅನುಕೂಲವಾಗಲು ಜಾಮಿಟ್ರಿ ಬಾಕ್ಸ್, ಗ್ರಾಫ್‌ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡುತ್ತಿದ್ದರು.
ಅರಾಭಿಕೊತ್ತನೂರು ಶಾಲೆ ಆವರಣದಲ್ಲಿ ಧನಾತ್ಮಕ ಶಕ್ತಿಯ ಸಂಚಲನವಾಗುತ್ತಿದೆ, ಇಲ್ಲಿನ ಪರಿಸರ,ಬೆಟ್ಟದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲು ಕಲಿಕೆಗೆ ಹೇಳಿ ಮಾಡಿಸಿದಂತಿದೆ, ಈ ವಾತಾವರಣದಲ್ಲಿ ಮಕ್ಕಳು ಕಲಿತರೆ ಸಾಧಕರಾಗುವುದರಲ್ಲಿ ಸಂಶಯವಿಲ್ಲ ಎಂದರು.
ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಸಮಾಜ, ಸಂಸ್ಥೆಗಳು ಕೈಜೋಡಿಸಬೇಕು, ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಲು ಪೋಷಕರು ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.
ಜಾತಿ,ಧರ್ಮದ ಎಲ್ಲೆ ಮೀರಿ ನಾವೆಲ್ಲಾ ಒಂದೇ ಎಂಬ ಪವಿತ್ರ ಭಾವನೆಯೊಂದಿಗೆ ಉತ್ತಮ ಸ್ನೇಹಿತರಾಗಿ ಕಲಿಕೆಯ ಧ್ಯೇಯ,ಗುರಿ ಸಾಧನೆಗೆ ಮುನ್ನಡಿ ಬರೆಯಬೇಕು,ಮೊಬೈಲ್,ಟಿವಿ ಅಗತ್ಯಕ್ಕಿಂತ ಹೆಚ್ಚು ಬಳಸದಿರಿ, ಅವುಗಳ ದಾಸರಾಗದಿರಿ ಎಂದು ಕಿವಿಮಾತು ಹೇಳಿದರು.ನಿವೃತ್ತ ಇಂಜಿಯಿಯರ್ ಹಾಗೂ ಕೊಡುಗೈ ದಾನಿ ರಘುರಾಜ್ ಅವರ ಸಹೋದರ ವೆಂಕಟರಾಮ್ ಮಾತನಾಡಿ, ಸೌಲಭ್ಯಗಳ ಸದ್ಬಳಕೆ ಕಂಡಾಗ ನೀಡುತ್ತಿರುವ ಸಹಾಯ ಸಾರ್ಥಕವೆನಿಸುತ್ತಿದೆ, ಇಂತಹ ಶಾಲೆಗೆ ಇನ್ನಷ್ಟು ನೆರವು ಒದಗಿಸುವ ಮೂಲಕ ನಿಮ್ಮೊಂದಿಗೆ ಸದಾ ಇರುವುದಾಗಿ ತಿಳಿಸಿದರು.
ರಘುರಾಜ್ ಅವರ ಹೃದಯವಂತಿಕೆಗೆ ಸಾಟಿಯಿಲ್ಲ, ಬೆಂಗಳೂರಿನವರಾದ ಅವರು ಕೋಲಾರ ತಾಲ್ಲೂಕಿನ ನಮ್ಮ ಸರ್ಕಾರಿ ಶಾಲೆ ಕುರಿತು ಹೊಂದಿರುವ ಪ್ರೀತಿ ಅಸಾಧಾರಣವಾದುದು ಪ್ರತಿ ವರ್ಷವೂ ಸುಮಾರು ೫೦ ಸಾವಿರದಷ್ಟು ನೋಟ್ ಪುಸ್ತಕಗಳು,ಸ್ಟೇಷನರಿಗಳ ನೆರವು ಒದಗಿಸಿ ನಿಸ್ವಾರ್ಥತೆ ಮೆರೆದಿದ್ದಾರೆ ಅವರಿಗೆ ದೇವರು ಉತ್ತಮ ಆರೋಗ್ಯ,ಐಶ್ವರ್ಯ ನೀಡಲಿ ಎಂದು ಶಾಲೆಯ ಎಲ್ಲಾ ಮಕ್ಕಳ ಪರವಾಗಿ ಹಾರೈಸುವುದಾಗಿ ನುಡಿದರು.
ಶಿಕ್ಷಕ ಶ್ರೀನಿವಾಸಲು ಕಾರ್ಯಕ್ರಮ ನಿರೂಪಿಸಿ,ಸ್ವಾಗತಿಸಿದ್ದು, ಕಾರ್ಯಕ್ರಮದಲ್ಲಿ ಶಿಕ್ಷಕರಾದ ಭವಾನಿ,ಸುಗುಣಾ, ಶ್ವೇತಾ,ವೆಂಕಟರೆಡ್ಡಿ, ಫರೀದಾ,ಶ್ರೀನಿವಾಸಲು, ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.