ಸಾವಿನ ಮನೆಯಲ್ಲಿ ರಾಜಕೀಯ ಸಲ್ಲದು
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.12:- ಶವವನ್ನು ಮುಂದಿಟ್ಟು ಕೊಂಡು ಹೀನ ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ ಅದು ಪ್ರಚಾರಕ್ಕಾಗಿ ರಾಜಕೀಯ ಮಾಡುವವರ ಜಾಯಮಾನ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರ ವಿರುದ್ದ ಶಾಸಕ ಡಿ.ರವಿಶಂಕರ್ ಪರೋಕ್ಷ ವಾಗ್ದಾಳಿ ನಡೆಸಿದರು.
ಪಟ್ಟಣದ ಕಾಳೇನಹಳ್ಳಿಯಲ್ಲಿರುವ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದ ಆತ್ಮಹತ್ಯೆ ವಿಚಾರದಲ್ಲಿ ಅವರು ಅನಗತ್ಯವಾಗಿ ಕೆಟ್ಟ ರಾಜಕಾರಣ ಮಾಡುತ್ತಿದ್ದು ಇದು ಯಾರಿಗೂ ಶೋಭೆ ತರುವ ವಿಚಾರವಲ್ಲ ಈ ಹಿಂದೆ ನೀವು ಶಾಸಕರಾಗಿದ್ದ 15 ವರ್ಷಗಳ ಅವಧಿಯಲ್ಲಿ ಇಂತಹಾ ಹತ್ತಾರು ಘಟನೆಗಳು ನಡೆದಿದ್ದವು ಆಗ ನಾವು ನಿಮಗೆ ಸಹಕಾರ ನೀಡಿರಲಿಲ್ಲವೇ ಎಂದು ಪ್ರಶ್ನಿಸಿದರು.
ಪ್ರಕರಣವನ್ನು ಮುಚ್ಚಿಹಾಕಲು ವ್ಯವಸ್ಥಿತ ಹುನ್ನಾರ ನಡೆದಿತ್ತು ಎಂದು ಸಾ.ರಾ.ಮಹೇಶ್ ಆರೋಪಿಸಿದ್ದು ಇದು ಸಾಬೀತಾದರೆ ನಾನು ನನ್ನ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಲಿದ್ದು ಇದಕ್ಕೆ ಸೂಕ್ತ ಸಾಕ್ಷಾಧಾರ ನೀಡಲು ನೀವು ಸಿದ್ದರಿದ್ದೀರಾ ಎಂದು ಸವಾಲು ಹಾಕಿದರು.
ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಹತ್ತು ವರ್ಷದ ಹಿಂದೆ ಯುವಕನೋರ್ವನ ಕೊಲೆಯಾಗಿ ಗ್ರಾಮವೇ ಹೊತ್ತಿ ಉರಿಯುತ್ತಿದ್ದಾಗ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಲು ಸಹಕಾರ ನೀಡಿದ್ದೆ ಆದರೆ ಈಗ ನೀವು ಮಾಡುತ್ತಿರುವ ಕೆಲಸವಾದರೂ ಏನೆಂದು ಕೇಳಿದ ಶಾಸಕರು ಇದರ ಜತೆಗೆ ಸಿದ್ದಾಪುರ ಮತ್ತು ನಾರಾಯಣಪುರ ಗ್ರಾಮದಲ್ಲಿ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಬೇಕು ಎಂದು ಮಾಜಿ ಸಚಿವರನ್ನು ಕುಟುಕಿದರು.
ಸಾಲಿಗ್ರಾಮ ಪಟ್ಟಣದ ದಲಿತರ ಮನೆಗಳ ಮೇಲೆ ನಿಮ್ಮ ಸಹೋದರ ಕಲ್ಲುಹೊಡೆಸಿ ತೊಂದರೆ ನೀಡಿದಾಗ ಸಭೆ ನಡೆಸಿದ ನೀವು ನೊಂದ ದಲಿತ ಕುಟುಂಬಗಳಿಗೆ ಪರಿಹಾರ ಕೊಡಿಸುತ್ತೇನೆ ಎಂದು ಬೂಟಾಟಿಕೆಯ ರಾಜಿ ಕಬೂಲಿ ಮಾಡಿದ್ದಿರಿ ಆದರೆ ಈವರೆಗೆ ಒಬ್ಬ ನೊಂದ ದಲಿತನಿಗಾದರೂ ಪರಿಹಾರ ದೊರೆತಿದೆಯೇ ಎಂದು ಮರುಪ್ರಶ್ನೆ ಹಾಕಿದರು.
ಸೋಮವಾರ ಮಧ್ಯಾಹ್ನ ಮೃತ ಮಹದೇವ ನಾಯಕನ ಶವದ ಮುಂದೆ ಗಿಮಿಕ್ ರಾಜಕಾರಣ ಮಾಡಿ ಮುಖ್ಯಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ನಾನು ಮಾತನಾಡಿ ಬರೆಯಿಸಿದ್ದ ಪರಿಹಾರದ ಚೆಕ್ಕನ್ನು ಅಧಿಕಾರಿಗಳಿಗೆ ಬೆದರಿಸಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡರ ಮೂಲಕ ಕೊಡಿಸಿದ್ದು ಎಷ್ಟು ಸರಿ ಎಂದು ಕೇಳಿದರು.
ಮೃತ ಕುಟುಂಬಕ್ಕೆ ಪರಿಹಾರದ ಚೆಕ್ ಕೊಡಿಸಲು ನೀವೇನು ಕ್ಷೇತ್ರದ ಶಾಸಕರೋ ಅಥವಾ ಉನ್ನತ ಅಧಿಕಾರಿಯೋ ಎಂದ ಅವರು ಮುಂದಾದರೂ ಅಭಿವೃದ್ದಿ ವಿಚಾರದಲ್ಲಿ ಸಹಕಾರ ನೀಡಿ ಇಲ್ಲವಾದರೆ ನನಗೆ ಕೆಲಸ ಮಾಡುವುದು ಗೊತ್ತಿದೆ ಎಂದು ಹೇಳಿದರು.
ಕೆಲವು ಯುವಕರಿಂದ ನನ್ನ ಮತ್ತು ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿಸಿದ್ದೀರಿ ಹೀಗೆ ಮಾಡಲು ನನಗೂ ಬರುತ್ತದೆ ಆದರೆ ಅಂತಹಾ ನೀಚ ರಾಜಕಾರಣ ಮಾಡುವ ಪರಿಸ್ಥಿತಿ ನನಗೆ ಬಂದಿಲ್ಲ ಈ ವಿಚಾರದಲ್ಲಿ ನಾನು ನಡೆದುಕೊಂಡಿ ರುವುದು ಜವಾಬ್ದಾರಿಯಿಂದ ಆದರೆ ಸಾ.ರಾ.ಮಹೇಶ್ ಮಾಡಿರುವುದು ನಾಟಕವೆಂದು ಜರಿದರು.
ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಕಲ್ಲಹಳ್ಳಿಶ್ರೀನಿವಾಸ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‍ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಚಂದಗಾಲು ಗ್ರಾ.ಪಂ. ಅಧ್ಯಕ್ಷ ಸತೀಶ್, ಪುರಸಭೆ ಸದಸ್ಯರಾದ ಶಿವುನಾಯಕ್, ಕೋಳಿಪ್ರಕಾಶ್, ಕೆ.ಎಸ್.ಶಂಕರ್, ಮಾಜಿ ಅಧ್ಯಕ್ಷ ನರಸಿಂಹರಾಜು, ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಜಿಲ್ಲಾ ನಿರ್ದೇಶಕ ದಿಡ್ಡಹಳ್ಳಿ ಡಿ.ಜೆ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಎಸ್‍ಟಿ ವಿಭಾಗದ ತಾಲೂಕು ಅಧ್ಯಕ್ಷ ತಿಪ್ಪೂರುಮಹದೇವನಾಯಕ, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್‍ಜಾಬೀರ್, ತಾ.ಪಂ. ಮಾಜಿ ಸದಸ್ಯ ನಂಜುಂಡ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.