ಬೀಜ, ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಕ್ರಮವಹಿಸಿ: ಜಿಲ್ಲಾಧಿಕಾರಿ ಟಿ. ಭೂಬಾಲನ್
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.12 :ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ಪೂರೈಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದರು.
ಮುಂಗಾರು ಹಂಗಾಮು ಸಿದ್ಧತೆ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದರೆ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಸಂಗ್ರಹಿಸುವ ಕಾರ್ಯ ಮಾಡಬೇಕು. ರೈತ ಸಂಪರ್ಕ ಕೇಂದ್ರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಸರಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚಿನ ಹಣವನ್ನು ರೈತರಿಂದ ವಸೂಲಾತಿ ಮಾಡುತ್ತಿರುವುದು ಕಂಡು ಬಂದರೆ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.
ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ 2,66,970 ಹೇಕ್ಟರ್ ನೀರಾವರಿ, 4,44,400 ಹೇಕ್ಟರ್ ಕುಷ್ಕಿ ಸೇರಿದಂತೆ ಒಟ್ಟು 7,11,370 ಹೇಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬಿತ್ತನೆ ಬೀಜದ ದಾಸ್ತಾನು ವಿವರ:
ರೈತರಿಂದ ತೊಗರಿ ಬೀಜಕ್ಕೆ ಬೇಡಿಕೆ ಜಾಸ್ತಿ ಬರುತ್ತಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 5788.25 ಕ್ವಿಂಟಲ್ ಬೀಜವನ್ನು ಸ್ವೀಕರಿಸಿದ್ದು, 4095.67 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು 1702.58 ಕ್ವಿಂಟಲ್ ನಷ್ಟು ತೊಗರಿ ಬೀಜ ಲಭ್ಯತೆಯಿದೆ. ಮುಂದೆ ರೈತರ ಬೇಡಿಕೆಗೆ ಅನುಗುಣವಾಗಿ ಇನ್ನಷ್ಟು ಬೀಜವನ್ನು ದಾಸ್ತಾನು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಬಸವನ ಬಾಗೇವಾಡಿ, ವಿಜಯಪುರ, ಮುದ್ದೇಬಿಹಾಳ, ಇಂಡಿ, ಸಿಂದಗಿ ತಾಲೂಕುಗಳ ವ್ಯಾಪ್ತಿಯಲ್ಲಿ 51 ಕ್ವಿಂಟಲ್ ಹೆಸರು ಬೀಜಕ್ಕೆ ಬೇಡಿಕೆಯಿದ್ದು, 24.52 ಕ್ವಿಂಟಲ್‍ನಷ್ಟು ವಿತರಣೆ ಮಾಡಲಾಗಿದೆ, 49.20 ಕ್ವಿಂಟಲ್ ಹೆಸರು ಬೀಜ ದಾಸ್ತಾನು ಇದೆ. 140 ಕ್ವಿಂಟಲ್ ಸಜ್ಜೆ ಬೀಜಕ್ಕಾಗಿ ಬೇಡಿಕೆಯಿದ್ದು, 19.66 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, 39.30 ಕ್ವಿಂಟಲ್ ಬೀಜ ದಾಸ್ತಾನಿದೆ. 9535 ಕ್ವಿಂಟಲ್ ಮೆಕ್ಕೆಜೋಳಕ್ಕೆ ಬೇಡಿಕೆಯಿದ್ದು, 836.86 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, 905 ಕ್ವಿಂಟಲ್ ಬೀಜ ದಾಸ್ತಾನಿದÉ. 250 ಕ್ವಿಂಟಲ್‍ನಷ್ಟು ಸೂರ್ಯಕಾಂತಿ ಬೀಜಕ್ಕೆ ಬೇಡಿಕೆಯಿದ್ದು, 5.58 ಕ್ವಿಂಟಲ್ ಬೀಜವನ್ನು ರೈತರಿಗೆ ವಿತರಣೆ ಮಾಡಲಾಗಿದ್ದು, 36 ಕ್ವಿಂಟಲ್ ಬೀಜ ದಾಸ್ತಾನಿದೆ. ಶೇಂಗಾ ಬೀಜಕ್ಕೆ 25 ಕ್ವಿಂಟಲ್ ಬೇಡಿಕೆಯಿದ್ದು, 25 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ ಎಂದು ತಿಳಿಸಿದರು.
ರಸಗೊಬ್ಬರ ದಾಸ್ತಾನು ವಿವರ:
ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ದಾಸ್ತಾನು ಇದ್ದು, 51642.456 ಮೆಟ್ರಿಕ್ ಟನ್ ಯೂರಿಯಾ, 7094.92 ಮೆಟ್ರಿಕ್ ಟನ್ ಡಿಎಪಿ, 1914.945 ಮೆಟ್ರಿಕ್ ಟನ್ ಎಂಒಪಿ, 33615.395 ಮೆಟ್ರಿಕ್ ಟನ್ ಎನ್‍ಪಿಕೆಎಸ್, 2924.65 ಮೆಟ್ರಿಕ್ ಟನ್ ಎಸ್‍ಎಸ್‍ಪಿ, 1.15 ಮೆಟ್ರಿಕ್ ಟನ್ ಕಾಂಪೆÇೀಸ್ಟ್ ರಸಗೊಬ್ಬರ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಸೇರಿದಂತೆ ಅಧಿಕಾರಿಗಳು, ತಹಶೀಲ್ದಾರ, ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.