ಸಮಗ್ರ ಪೋಷಕಾಂಶ ಬಳಸಿ ಉತ್ಪಾದನೆ ಹೆಚ್ಚಿಸಲು ರೈತರಿಗೆ ಸಲಹೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.12 :ನಗರÀ ಹೊರ ವಲಯದ ಹಿಟ್ನಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ 15 ದಿವಸಗಳ ಸಮಗ್ರ ಪೋಷಕಾಂಶ ನಿರ್ವಹಣೆ ಸರ್ಟಿಫಿಕೇಟ್ ಕೋರ್ಸಿನ ಉದ್ಘಾಟನಾ ಸಮಾರಂಭ ಜರುಗಿತು.
ಹಿಟ್ನಳ್ಳಿ ಕೃಷಿ ಮಹಾ ವಿದ್ಯಾಲಯದ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ಕೃಷಿ ಇಲಾಖೆಯು ಸುಸ್ಥಿರ ಕೃಷಿ ಹಾಗೂ ಲಾಭದಾಯಕವಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ವಿಶೇಷವಾಗಿ ಯುವಕರನ್ನು ಕೃಷಿಯೆಡೆಗೆ ಆಕರ್ಷಿಸಬೇಕಾಗಿದೆ. ಕಾರಣ ಇಲಾಖೆಯು ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗಿದೆ. ರೈತರಿಗೆ ಭೂಫಲವತ್ತತೆ, ಸಮಗ್ರ ಪೋಷಕಾಂಶಗಳ ನಿರ್ವಹಣೆಗಾಗಿ ಸೂಕ್ತ ರಸಗೊಬ್ಬರಗಳನ್ನು ಶಿಫಾರಸ್ಸು ಪ್ರಮಾಣದಲ್ಲಿ ಬಳಸಲು ಸಲಹೆ ನೀಡಬೇಕಾಗಿದೆ. ಕಾರಣ ಈ ತರಬೇತಿಯಿಂದ ತಾವೆಲ್ಲ ರೈತರಿಗೆ ಸೂಕ್ತ ಮಾಹಿತಿ ಜೊತೆಗೆ, ಉತ್ತಮ ಗುಣಮಟ್ಟದ ರಸಗೊಬ್ಬರ ಪೂರೈಸಲು ಸಲಹೆ ಮಾಡಿದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರವೆಂದು ಪರಿಗಣಿಸಿ, ರೈತರಿಗಾಗಿ ಒಂದೇ ಸೂರಿನಡಿ ಎಲ್ಲ ಕೃಷಿ ಪರಿಕರಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಸಂಬಂಧಿಸಿದವರಿಗೆ 15 ದಿವಸಗಳ ಸಮಗ್ರ ಪೋಷಕಾಂಶ ತರಬÉೀತಿ ನೀಡಿ ಸನ್ನದ್ಧಗೊಳಿಸಲಾಗುತ್ತದೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ ಮಾತನಾಡಿ, ರೈತರಿಗಾಗಿ ಹವಾಮಾನ ಸಲಹೆ, ಕೃಷಿ ಮಾಹಿತಿ ಒಳಗೊಂಡಂತೆ ಎಲ್ಲ ಮಾಹಿತಿಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಿಬ್ಬಂದಿಗಳಿಗೆ ಒದಗಿಸಲು ಕ್ರಮವಹಿಸಲಾಗುವುದೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಂ ರಾಜಶೇಖರ, ಕೃಷಿ ಪರಿಕರ ಮಾರಾಟಗಾರರು ಅಲ್ಲಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುತ್ತಾರೆ. ಅದು ರೈತರಿಗೆ ಮಾಡುವ ಮೋಸವಾಗಿದೆ. ಕಾರಣ ವಿವಿಧ ಕಂಪನಿಯ ರಸಗೊಬ್ಬರಗಳಲ್ಲಿ ವಿವಿಧ ಪೋಷಕಾಂಶಗಳ ಪ್ರಮಾಣವಿರುತ್ತದೆ. ಅಧಿಕ ಇಳುವರಿ ಪಡೆಯಲು ಸಮಗ್ರ ಪೋಷಕಾಂಶ ನಿರ್ವಹಣೆ ತರಬೇತಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ. ಬಾಲರಾಜ ಆರ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, 15 ದಿನಗಳ ತರಬೇತಿ ಅವಧಿಯಲ್ಲಿ ವಿವಿಧ ಸಸ್ಯ ಪೋಷಕಾಂಶಗಳು, ಮಣ್ಣು ಮತ್ತು ನೀರಿನ ಮಾದರಿ ಸಂಗ್ರಹಣೆ, ಪ್ರಾಯೋಗಿಕ ಎರೆಗೊಬ್ಬರ ತಯಾರಿಕೆ, ರಸಗೊಬ್ಬರಗಳನ್ನು ಮತ್ತು ಮಣ್ಣು ಸುಧಾರಕಗಳನ್ನು ಗುರುತಿಸುವುದು, ಮಣ್ಣಿನಲ್ಲಿ ಲಘು ಪೋಷಕಾಂಶಗಳ ವಿಶ್ಲೇಷಣೆ ಹಾಗೂ ರಸಗೊಬ್ಬರಗಳ ಲೆಕ್ಕಾಚಾರ ಇತ್ಯಾದಿ ವಿಷಯಗಳನ್ನು ನೀಡಲಾಗುವುದು. ಕಾರಣ ಎಲ್ಲರು ಸಮಯಕ್ಕನುಸಾರವಾಗಿ, ಕಡ್ಡಾಯವಾಗಿ ತರಬೇತಿಯಲ್ಲಿ ಭಾಗವಹಿಸಬೇಕೆಂದರು.
ದೇಶಿ ರಾಜ್ಯ ನೋಡಲ್ ಅಧಿಕಾರಿ ಡಾ. ಎಮ್. ಗೋಪಾಲ ಆವರು ಆನ್‍ಲೈನಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎಸ್. ಎಮ್. ವಸ್ತ್ರದ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕÀ ವಿಜಯಲಕ್ಷ್ಮೀ ಚವ್ಹಾಣ, ಪಾರ್ವತಿ ಪಾಟೀಲ, ಪ್ರಶಾಂತ ಸಾನಿ, ಕೃಷಿ ಅಧಿಕಾರಿ ಎಮ್. ಆರ್. ಮೈದರಗಿ, ಗೀತಾ ಬಜಂತ್ರಿ, ಪಾತಿಮಾಬಾನು ಸೇರಿದಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿವರ್ಗ, ಜಿಲ್ಲೆಯ ಪ್ರಾಥಮಿಕ ಕೃಷಿಪತ್ತಿನ ಕಾರ್ಯದರ್ಶಿಗಳು ಭಾಗವಹಿಸಿದ್ದರು.