ಹೊಸ ಅಪರಾಧಿಕ ಕಾನೂನುಗಳ ಅರಿವು ಅಗತ್ಯ : ಪ್ರೊ. ದಯಾನಂದ ಅಗಸರ
ಕಲಬುರಗಿ:ಜೂ.11: ನಾಗರೀಕ ಸಮಾಜಕ್ಕೆ ತುರ್ತುಗಿ ಕಾನೂನು ಸೇವೆಗಳನ್ನು ಒದಗಿಸಲು ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಅಪರಾಧಿಕ ಕಾನೂನು ಸಹಕಾರಿಯಾಗಿದೆ. ಸಮಾಜದಲ್ಲಿ ಜರುಗುತ್ತಿರುವ ವಿಭಿನ್ನ ಅಪರಾಧ ಪ್ರಕರಣಗಳು ಮತ್ತು ಸಮಾಜ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಲು ಜಾರಿಗೊಳಿಸುತ್ತಿರುವ ಹೊಸ ಕಾನೂನು ಸಂಹಿತೆಗಳ ಅರಿವು ನಾಗರೀಕ ಸಮಾಜ ಮತ್ತು ಯುವ ಜನಾಂಗಕ್ಕೆ ಅಗತ್ಯವಿದೆ. ಬದಲಾಗುತ್ತಿರುವ ಕಾನೂನುಗಳು ಪಾಲಿಸುವುದು ನಾಗರೀಕರ ಜವಾಬ್ದಾರಿಯಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಇಂದು ಆಯೋಜಿಸಿದ ‘ಹೊಸ ಅಪರಾಧಿಕ ಕಾನೂನುಗಳ ಅರಿವು’ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರ ಮಾಡುವ ಕಾನೂನು ಬದಲಾವಣೆ ಮತ್ತು ಜಾರಿಗೊಳಿಸುವ ಹೋಸ ಕಾನೂನುಗಳ ಬಗೆ ನಾಗರೀಕ ಸಮಾಜ ಎಚ್ಚೆತ್ತುಕೊಳ್ಳಬೇಕು. ನ್ಯಾಯ ಸಮ್ಮತ ಜೀವನ ನಡೆಸುವ ಮೂಲಕ ಕಾನೂನಗಳನ್ನು ಅನುಸರಿಸಬೇಕು. ಹೊಸ ಕಾನೂನು ತಿಳುವಳಿಕೆ ಹಾಗೂ ಪಾಲನೆಯಿಂದ ಉತ್ತಮ ಸಮಾಜ ನಿರ್ಮಿಸುವ ಜೊತೆಗೆ ನೆಮ್ಮದಿಯ ಬದುಕು ರೂಪಿಸಿಕೊಳ್ಳಬಹುದು ಎಂದರು.
ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದ ಎಸ್‍ಪಿ ಮತ್ತು ಪ್ರಾಂಶುಪಾಲರು ಹಾಗೂ ಐಪಿಎಸ್ ಅಧಿಕಾರಿ ಡಿ. ಕಿಶೋರ್ ಬಾಬು ಮುಖ್ಯ ಅತಿಥಿಯಾಗಿ ಮಾತನಾಡಿ ಬ್ರಿಟೀಷರು ಭಾರತದಲ್ಲಿ ತಮ್ಮ ಆಡಳಿತ ಹಿತದೃಷ್ಠಿಯಿಂದ ಜಾರಿಗೆ ತರಲಾಗಿದ್ದ ಕಾನೂನುಗಳನ್ನು ಸರ್ಕಾರ ಬದಲಾಯಿಸುವ ಮೂಲಕ ಹೊಸ ಅಪರಾಧಿ ಕಾನೂನುಗಳನ್ನು ಜುಲೈ 1 ರಿಂದ ಜಾರಿಗೆ ತರುತ್ತಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‍ಎಸ್) ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ (ಬಿಎನ್‍ಎಸ್‍ಎಸ್) ಮತ್ತು ಭಾರತೀಯ ಸಾಕ್ಷಿ ಅಧಿನಿಯಮ (ಬಿಎಸ್) ಎಂಬುದಾಗಿ ಹೊಸ ಸಂಹಿತೆಗಳನ್ನು ಜಾರಿಗೆ ತಂದು ತುರ್ತಾಗಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಉದ್ದೇಶವಿದೆ ಎಂದರು.
ಹೊಸ ಅಪರಾಧಕ ಕಾನೂನು ಪರಿಧಿಯಲ್ಲಿ ಕ್ರಿಮಿನಲ್ ಅಪರಾಧಗಳ ಸಂಬಂಧ ನೊಂದ ನಾಗರೀಕರಿಗೆ ಹಾಗೂ ನಿರಪರಾಧಿಗಳ ಸುರಕ್ಷತೆ ಹಿತದೃಷ್ಠಿಯಿಂದ ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಈ ಹೊಸ ಕಾನೂನುಗಳು ಅನುಕೂಲವಾಗಿವೆ. ಇಂದಿನ ಸಮಾಜದಲ್ಲಿ ಜರುಗುತ್ತಿರುವ ಅನೇಕ ಅಪರಾಧ ಪ್ರಕರಣಗಳು ವಿಭನ್ನತೆಯಿಂದ ಕೂಡಿವೆ. ಪ್ರಸ್ತುತ ಸರ್ಕಾರ ತರುತ್ತಿರುವ ಕಾನೂನು ಸ್ವರೂಪ, ವಿಚಾರಣೆ ಮತ್ತು ಯಾವ ಪ್ರಕರಣಗಳಿಗೆ ಯಾವ ಸ್ವರೂಪದ ಶಿಕ್ಷೆ ನೀಡಲಾಗುತ್ತದೆ ಎಂಬುದರ ಅರಿವು ಇಂದಿನ ಸಮಾಜ ಮತ್ತು ಯುವ ಜನತೆಯ ತಿಳುವಳಿಕೆಗೆ ತರುವುದು ಅತಿ ಮಹತ್ವದ ವಿಷಯವಾಗಿದೆ. ತಂತ್ರಜ್ಞಾನ ಯುಗದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಸಮಾಜವನ್ನು ಬಾಧಿಸುತ್ತಿವೆ. ಕೊಲೆ, ಸುಲಗೆ, ದರೋಡೆ, ಅತ್ಯಾಚಾರ, ಮೋಸ, ವಂಚನೆ, ಸಾಮೂಹಿಕ ಅತ್ಯಾಚಾರ, ದೇಶದ್ರೋಹ, ರೇಸ್, ಕಿಡ್ನಾಪ್, ಭಯೋತ್ಪಾದಕ ಕೃತ್ಯ, ಸಂಘಟಿತ ಅಪರಾಧ ಪ್ರಕರಣಗಳ ಬಗೆ ಆನ್‍ಲೈನ್ ಅಥವಾ ಇಮೇಲ್ ಮೂಲಕ ಪ್ರಕರಣ ದಾಖಲಿಸುವ ವ್ಯವಸ್ಥೆಯಿದೆ. ಅಪರಾಧಿಗಳನ್ನು ಪತ್ತೆ ಮಾಡಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಶೀಘ್ರವಾಗಿ ಶಿಕ್ಷೆ ವಿಧಿಸಲು ಈ ಹೊಸ ಕಾನೂನುಗಳು ಮಾರ್ಗಸೂಚಿಯಾಗಿವೆ ಎಂದ ಅವರು ಹೊಸ ಕಾನೂನಗಳ ಸ್ವರೂಪವನ್ನು ಸವಿಸ್ತಾರವಾಗಿ ವಿವರಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಜಿ. ಕಣ್ಣೂರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದರು. ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀರಾಮುಲು, ಎಂಜಿನಿಯರ್ ವಿಭಾಗದ ರಾಜಪ್ಪ, ಪೊಲೀಸ್ ತರಬೇತಿ ಮಹಾವಿದ್ಯಾಲಯದ ಇನ್ಸ್‍ಪೆಕ್ಟರ್‍ಗಳಾದ ಶಾಂತಿನಾಥ ಬಿ.ಪಿ., ರಾಜಶೇಖರ್ ಬಡದೇಸಾಯಿ, ಹುಸೇನ್ ಬಾಷಾ, ಮಹದೇವ್ ದಿಡ್ಡಿಮನೆ, ವಿಶ್ವವಿದ್ಯಾಲಯದ ಅಧಿಕಾರಿಗಳು, ಸ್ನಾತಕೋತ್ತರ ವಿಭಾಗಗಳ ಪ್ರಾಧ್ಯಾಪಕರು, ಡೀನರುಗಳು, ಶಿಕ್ಷಕೇತರ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಜಿ. ಕಣ್ಣೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.