ಕೊಡ್ಲಿ ಗ್ರಾಮದಲ್ಲಿ ಅಕ್ರಮ ಸೌಳು ಗಣಿಗಾರಿಕೆ: ಕ್ರಮಕ್ಕೆ ವೀರ ಕನ್ನಡಿಗರ ಸೇನೆ ಆಗ್ರಹ
ಕಲಬುರಗಿ,ಜೂ.11- ಜಿಲ್ಲೆಯ ನೂತನ ಕಾಳಗಿ ತಾಲೂಕಿನ ಕೊಡ್ಲಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆ ಹತ್ತಿರದ ಜಮೀನುಗಳಲ್ಲಿ ಅಕ್ರಮವಾಗಿ ಸೌಳು ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯವಂತೆ ವೀರ ಕನ್ನಡಿಗರ ಸೇನೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೊಡ್ಲಿ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಮುಂಭಾಗ ಮತ್ತು ಹಿಂಭಾಗದ ಸರ್ವೇ ನಂ:107, 108, 109, 137 ಮತ್ತು ಇದರ ಸುತ್ತ ಮುತ್ತಲಿನ ಜಮೀನುಗಳಲ್ಲಿ ಸಂಬಂಧಿಸಿದ ಇಲಾಖೆಯಿಂದ ಪರವಾನಿಗೆ ಪಡೆಯದೇ ಕಾನೂನು ಬಾಹಿರವಾಗಿ ಸೌಳು ಗಣಿಗಾರಿಕೆಯನ್ನು ಮಾಡುತ್ತಿದೆ.
ಇಲ್ಲಿನ ಅಕ್ರಮ ಗಣಿಗಾರಿಕೆಯ ವ್ಯವಹಾರಳು ರಾತೋರಾತ್ರಿ ನಡೆಸಲಾಗುತ್ತಿದೆ. ಇಲ್ಲಿನ ಜಮೀನುಗಳಿಂದ ಸಿಕ್ಕಾಪಟ್ಟೆ ಸೌಳು ಗಣಿಗಾರಿಕೆ ನಡೆಸಲಾಗುತ್ತಿದ್ದು, ಇಲ್ಲಿನ ಸೌಳು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಗೆ ಕಳ್ಳ ಸಂತೆಯಲ್ಲಿ ಮಾರಾಟವಾಗುತ್ತಿದೆ.
ಸರ್ಕಾರಕ್ಕೆ ಬರಬೇಕಾದ ಶುಲ್ಕವನ್ನು ಕಟ್ಟದ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಲಾಗುತ್ತಿದೆ. ಇಲ್ಲಿನ ಕಳ್ಳ ವ್ಯವಹಾರಗಳಿಗೆ ಸ್ಥಳೀಯ ಪೆÇಲೀಸ ಇಲಾಖೆಯ ಮತ್ತು ತಾಲೂಕ ದಂಡಾಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ವೀರ ಕನ್ನಡಿಗರ ಸೇನೆ ಆರೋಪಿಸಿದೆ.
ಇಲ್ಲಿನ ಅಕ್ರಮ ವ್ಯವಹಾರಗಳಲ್ಲಿ ಅಧಿಕಾರಿಗಳು, ಪೊಲೀಸರು ಶಾಮಿಲಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣವೇ ಕೊಡ್ಲಿ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಇಲ್ಲಿನ ಸೌಳುಗಣಿಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಸೇನೆ ಆಗ್ರಹಿಸಿದೆ.
ಅಕ್ರಮದಲ್ಲಿ ತೊಡಗಿರುವ ವಾಹನಗಳನ್ನು ವಶಪಡಿಸಿಕೊಂಡು ಆ ವಾಹನಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ವೀರಕನ್ನಡಿಗರ ಸೇನೆ ರಾಜ್ಯ ಘಟಕದ ಅಧ್ಯಕ್ಷ ಅಮೃತ ಸಿ.ಪಾಟೀಲ ಸಿರನೂರ ಅವರು, ಒತ್ತಾಯಿಸಿದ್ದಾರೆ. ಈ ಬಗ್ಗೆ ಈಗಾಗಲೇ ನಮ್ಮ ವೀರ ಕನ್ನಡಿಗರ ಸೇನೆ ಕಾಳಗಿ ತಾಲೂಕ ಘಟಕವು ಸಂಬಂಧಪಟ್ಟ ತಹಸೀಲ್ದಾರರಿಗೆ ಮತ್ತು ಪೆÇಲೀಸ ಅಧಿಕಾರಿಗಳಿಗೆ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿದಲ್ಲ ಎಂದು ಸೇನೆ ಸಂಸ್ಥಾಪಕ ಅಧ್ಯಕ್ಷ ಅಮೃತ ಪಾಟೀಲ ಅವರು ಆರೋಪಿಸಿದ್ದಾರೆ.
ಪ್ರತಿಭಟನೆ ಮೂಲಕ ಮನವಿ ಸಲ್ಲಿಸುವ ಸಂದರ್ಭದಲ್ಲಿ ಸೇನೆಯ ಪ್ರಮುಖರಾದ ರವಿ ಒಂಟಿ, ಅಭಿಶೆಕ, ಶಿವಾನಂದ ಚಕ್ಕಾಣಿ, ಪ್ರಶಾಂತ ಬಾಚನಳ್ಳಿ, ಅಣವೀರ ಬಿರಾದಾರ, ತಿಪ್ಪಣ್ಣ ಪವಾರ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.