ವರದಕ್ಷಿಣೆ ಕಿರುಕುಳ ನೀಡಿ ಕೊಲೆ
ಕಲಬುರಗಿ,ಜೂ.11-ವರದಕ್ಷಿಣೆ ಕಿರುಕುಳ ನೀಡಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಉಪಳಾಂವ ಕ್ರಾಸ್ ಹತ್ತಿರ ನಡೆದಿದೆ.
ಉಮಾಶ್ರೀ ಎಂಬ ಮಹಿಳೆಯನ್ನೇ ಗಂಡ ರಾಮು ಬಿರಾದಾರ, ಅತ್ತೆ, ಮಾವ, ಭಾವ ಮತ್ತು ನಾದಿನಿ ಮತ್ತ ಇತರರು ಸೇರಿ ವರದಕ್ಷಿಣೆ ಕಿರುಕುಳ ನೀಡಿ ಹೊಡೆ ಬಡೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಮೃತಳ ತಂದೆ ಚಂದ್ರಕಾಂತ ಮಲ್ದಿ ಎಂಬುವವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಕಮಲಾಪುರ ತಾಲ್ಲೂಕಿನ ಸೊಂತ ಗ್ರಾಮದ ಉಮಾಶ್ರೀಯನ್ನು ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದ ರಾಮು ಬಸವಂತ್ರಾಯ ಬಿರಾದಾರಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆ ಸಂದರ್ಭದಲ್ಲಿ 50 ಸಾವಿರ ರೂ.ನಗದು, 2/12 ತೊಲೆ ಬಂಗಾರ ಮತ್ತು ಗೃಹ ಬಳಕೆ ಸಾಮಾನು ನೀಡಲಾಗಿತ್ತು. ಮದುವೆಯಾದ ಮೂರು ತಿಂಗಳವರೆಗೆ ಉಮಾಶ್ರೀಯನ್ನು ಸರಿಯಾಗಿಯೇ ನೋಡಿಕೊಂಡ ಗಂಡನ ಮನೆಯವರು ಆ ನಂತರ ತವರು ಮನೆಯಿಂದ 2 ಲಕ್ಷ ರೂ.ನಗದು, 5 ತೊಲೆ ಬಂಗಾರ ತರುವಂತೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದರು. ಆಗ ಉಮಾಶ್ರೀ ಕುಟುಂಬದ ಸದಸ್ಯರು ರಾಮು ಮನೆಯವರಿಗೆ ತಿಳಿಸಿ ಹೇಳಿದ್ದರು. ಆ ನಂತರ ಉಮಾಶ್ರೀ ಹೆಣ್ಣು ಮಗುವಾಗಿತ್ತು. ತದನಂತರ ಮತ್ತೆ ರಾಮು ಮತ್ತು ಆತನ ಮನೆಯವರು ಉಮಾಶ್ರೀಗೆ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿ ಹೊಡೆ ಬಡೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಚಂದ್ರಕಾಂತ ಅಲ್ದಿ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.