ಮೈತ್ರಿ ಕಾರ್ಯಕರ್ತರು ರೈತರು, ಇಲಾಖೆಯ ಮಧ್ಯವರ್ತಿಯಾಗಿಕೆಲಸ ನಿರ್ವಹಿಸುವವರು:ಸಿಇಓ ಗಿರೀಶ ಬದೋಲೆ
ಬೀದರ. ಜೂ.11: ಮೈತ್ರಿ ಕಾರ್ಯಕರ್ತರು ಕೃತಕ ಗರ್ಭಧಾರಣೆಯ ಬಗ್ಗೆ ಮಾಹಿತಿಯನ್ನು ಚೆನ್ನಾಗಿ ಅರಿತುಕೊಂಡು, ಪಶುವೈದ್ಯ ಸಂಸ್ಥೆಗಳಲ್ಲಿ ಪ್ರಾಕ್ಟಿಕಲ್ ಕೆಲಸಗಳನ್ನು ಮಾಡಿ, ಪರಿಣಿತಿಯನ್ನು ಪಡೆಯಬೇಕು, ಮೈತ್ರಿ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ರೈತರು ಮತ್ತು ಇಲಾಖೆಯ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುವವರಾಗಿದ್ದಾರೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಗಿರೀಶ ಬದೋಲೆ ಹೇಳಿದರು.
ಅವರು ಸೋಮವಾರದಂದು ಜಿಲ್ಲಾ ಪಂಚಾಯತ್ ಬೀದರ, ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ವತಿಯಿಂದ 2024-25ನೇ ಸಾಲಿನ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆ ಅಡಿ ಮೈತ್ರಿ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ 1 ತಿಂಗಳ ಪಠ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮೈತ್ರಿ ಕಾರ್ಯಕರ್ತರು ರೈತರ ಮನೆಬಾಗಿಲಿಗೆ ತೆರಳಿ ಕೃತಕ ಗರ್ಭಧಾರಣೆಯನ್ನು ಕೈಗೊಳ್ಳುವುದರಿಂದ ಜಾನುವಾರುಗಳ ಹೆಚ್ಚಿನ ಸಂಖ್ಯೆಯಲ್ಲಿ ಕೃತಕ ಗರ್ಭಧಾರಣೆಯ ಗುರಿ ಸಾಧನೆ ಜೊತೆಗೆ ಉತ್ತಮ ತಳಿಯ ಹೆಚ್ಚಿನ ಹಾಲಿನ ಉತ್ಪಾದನೆಯ ಜಾನುವಾರುಗಳ ಕರುಗಳು ಹುಟ್ಟುವುದರಿಂದ ಅವುಗಳು ಮುಂದೆ ಹೆಚ್ಚಿನ ಹಾಲಿನ ಉತ್ಪಾದನೆ ಮಾಡುವುದರಿಂದ ರೈತರ ಆದಾಯ ಹೆಚ್ಚಿಸಲಿಕ್ಕೆ ಸಾಧ್ಯವಾಗುತ್ತದೆ ಜೊತೆಗೆ ಪ್ರಥಮ ಚಿಕಿತ್ಸೆ, ಜಂತಿನಾಸಕ ಔಷಧಿ ಕೊಡುವುದು, ಮೈಕ್ರೋ ಪ್ಲಾನಿಂಗ್ ಪಶು ಆರೋಗ್ಯ ಶಿಬಿರದಲ್ಲಿ ಸಹಾಯ, ಲಸಿಕಾ ಕಾರ್ಯಕ್ರಮದಲ್ಲಿ ಸಹಾಯ ಮಾಡುವುದರಿಂದ ಹೆಚ್ಚಿನ ರೀತಿಯಲ್ಲಿ ಇಲಾಖೆಗೆ ಮತ್ತು ರೈತರಿಗೆ ಉಪಯೋಗವಾಗಲಿದ್ದಾರೆ ಎಂದು ತಿಳಿಸಿದರು.
ಈ ತರಬೇತಿ ಕಾರ್ಯಕ್ರಮದಲ್ಲಿ 55 ಜನ ಮೈತ್ರಿ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ.ರವೀಂದ್ರಕುಮಾರ, ಸಹಾಯಕ ನಿರ್ದೇಶಕ ಡಾ.ರವೀಂದ್ರನಾಥ ಜಿ, ಡಾ.ಉದಯಕುಮಾರ, ಡಾ.ರಾವಸಾಬ್ ಪಾಟೀಲ್, ಡಾ.ಸೋಮಶೇಖರ, ಡಾ.ನಾಗರಾಜ, ಡಾ.ಗೌತಮ್ ಅರಳಿ, ಡಾ.ವಿಕ್ರಮ, ಡಾ.ಮಜೀಬ, ಡಾ.ಯೋಗೇಂದ್ರ ಕುಲಕರ್ಣಿ, ಡಾ.ಓಂಕಾರ ಪಾಟೀಲ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕರು (ಆಡಳಿತ) ಡಾ.ನರಸಪ್ಪಾ ಎ.ಡಿ., ಸಹಾಯಕ ನಿರ್ದೇಶಕ ಸಮೀಕ್ಷೆ ಶರ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.