ಭಾಷಾ ವಿನಮಯ ನಿರಂತರ: ಮೋಹನ್
(ಸಂಜೆವಾಣಿ ವಾರ್ತೆ)
ಬಳ್ಳಾರಿ .ಸೆ 25:  ಒಂದು ಭಾಷೆ ಇನ್ನೊಂದು ಭಾಷೆಯ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿ, ಪದಗಳ ಕೊಡುಕೊಳ್ಳುವಿಕೆ  ಪ್ರಾಚೀನ ಕಾಲದಿಂದ ಇಂದಿನವರೆಗೂ  ನಿರಂತರವಾಗಿ ನಡೆದಿದೆಂದು   ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ತೆಲುಗಿನ ಲೇಖಕ ಡಾ.ಪತ್ತಿಪಾಕ ಮೋಹನ್
ಅಭಿಪ್ರಾಯ ಪಟ್ಟಿದ್ದಾರೆ.
ಅವರು ನಿನ್ನೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ಭಾಷಾ ಬಾಂಧವ್ಯ ‘ ಕುರಿತ ಸಂವಾದ  ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು.
ತೆಲುಗಿನ ವೈವಿಧ್ಯಮಯ ಸಾಹಿತ್ಯವು ಅನುವಾದದ ಮೂಲಕ ಕನ್ನಡಕ್ಕೆ ಬಂದು ಹೊಸ ಸಂವೇದನೆಯನ್ನು ರೂಪಿಸಿದೆ. ಹೊಸ ಓದುಗರನ್ನು ಸೃಷ್ಟಿಸಿದೆ. ನಾನು ಕವಿ, ಲೇಖಕ ಎನ್ನುವದಕ್ಕಿಂತ ಒಬ್ಬ ಸಂವೇದನಾಶೀಲ ಮನುಷ್ಯ ಎಂದು ಗುರುತಿಸಿಕೊಳ್ಳುವುದು ಇಷ್ಟ ಎಂದರು.
ಕನ್ನಡದಲ್ಲಿ ಇರುವ ಹಾಗೆ ತೆಲುಗಿನ ಸಾಹಿತ್ಯದಲ್ಲೂ ಅನೇಕ ವಾದಗಳಿವೆ. ಪ್ರಧಾನವಾಗಿ ನನ್ನ ಮೇಲೆ ಎಡಪಂಥೀಯ ಚಿಂತನೆ, ಸ್ತ್ರೀವಾದ ತುಂಬಾ ಪ್ರಭಾವ ಬೀರಿದೆ ಎಂದು ತಮ್ಮ ಅನುಭವ ಲೋಕವನ್ನು ತೆರೆದಿಟ್ಟರು.
ವರ್ತಮಾನ ಕಾಲದಲ್ಲಿ ಭಾಷೆ ಮೀರಿ ಸಾಹಿತ್ಯದ ಮೂಲಕ ನಾವುಗಳೆಲ್ಲಾ ಒಂದಾಗಬೇಕಿದೆ.  ಈ ಒಳಗೊಳ್ಳುವಿಕೆಗೆ ಇಂಥ ಕಾರ್ಯಕ್ರಮಗಳು ಅತ್ಯಗತ್ಯ ಎಂದರು.
ಡಾ.ಕೆ‌.ಶಿವಲಿಂಗಪ್ಪ  ಸಂವಾದ ನಡೆಸಿದರು.
ಕಸಾಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ  ಸದ್ಯದ ದಿನಮಾನದಲ್ಲಿ ಬರಹಗಾರರ ಮೇಲೆ ಬಹುದೊಡ್ಡ ಸಾಮಾಜಿಕ ಹೊಣೆಗಾರಿಕೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಅರವಿಂದ ಪಟೇಲ್ ಮಾತೃಭಾಷೆಯನ್ನು ಅಲಕ್ಷಿಸಿ ಇನ್ನೊಂದು ಭಾಷೆಯನ್ನು ಕಲಿಯುವುದು ಕಷ್ಟ.ಯಾವುದೇ ಭಾಷೆ ಸಾಹಿತ್ಯ, ಸಾಂಸ್ಕೃತಿಕ ,ಸಾಮಾಜಿಕ ಬಾಂಧವ್ಯವನ್ನು ಬೆಸೆಯುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆಂದರು.
ವೇದಿಕೆ ಮೇಲೆ ಇದ್ದ ರಾಮಾಂಜನೇಯುಲು, ನೇತಿ ರಘುರಾಮ್ ಸಂವಾದದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದ ಸಮನ್ವಯವನ್ನು ಡಾ. ಶಿವಲಿಂಗಪ್ಪ ಹಂದಿಹಾಳು ನಿರ್ವಹಿಸಿದರು.
 ವೀರೇಂದ್ರ ರಾವಿಹಾಳ, ಅಜಯ ಬಣಕಾರ, ಡಾ.ದಸ್ತಗೀರಸಾಬ್ ದಿನ್ನಿ , ನಾಗರೆಡ್ಡಿ ಕೆ.ವಿ, ಎ.ಎರ್ರಿಸ್ವಾಮಿ, ಪಿ.ಆರ್. ವೆಂಕಟೇಶ್,ಅಹಿರಾಜ್, ಎ.ಎಂ.ಪಿ.ವಿರೇಶಸ್ವಾಮಿ, ಎನ್.ಡಿ.ವೆಂಕಮ್ಮ ,ಬಸವರಾಜ ಬಿಸ್ಲಳ್ಳಿ, ಮಂಜುನಾಥ ಗೋವಿಂದವಾಡ ಉಪಸ್ಥಿತರಿದ್ದರು.