ವಾರ್ಷಿಕ ಮಹಾಸಭೆ
ಚನ್ನಮ್ಮನ ಕಿತ್ತೂರ,ಸೆ25: ಆಡಳಿತ ಮಂಡಳಿ ಹಾಗೂ ಸದಸ್ಯರ ಶ್ರಮದ ಫಲವಾಗಿ ಈ ಸಂಘವು ಅಭಿವೃದ್ಧಿ ಹೊಂದಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಉಗರಖೋಡ ಹೇಳಿದರು.
ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ. ನಿಮ್ಮ ಸಹಕಾರದಿಂದ ಕೇಂದ್ರ ಸರ್ಕಾರದ ಲಾಭಗಳನ್ನು ಶೇರುದಾರರಿಗೆ ಮುಟ್ಟಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುವುದು. ಸಂಘದ ಸಾಲ ಪಡೆಯುವದು ಸದಸ್ಯರ ಹಕ್ಕು. ಸಕಾಲಕ್ಕೆ ಸಾಲ ಮರುಪಾವತಿ ಮಾಡುವುದು ಅವರ ಜವಾಬ್ದಾರಿಯಾಗಿದೆ ಎಂದು ಮನವಿ ಮಾಡಿದರು. ಒಟ್ಟಿನಲ್ಲಿ ಸಾಲ ಮರುಪಾವತಿಸಿ ಸಂಘ ಅಭಿವೃದ್ದಿಪಡಿಸುವುದರಲ್ಲಿ ಶೇರುದಾರರ ಪಾತ್ರ ಹಿರಿಯದ್ದಾಗಿದೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರದಿಂದ ಈ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದೇ ನನ್ನ ಗುರಿ ಎಂದರು. ನಿಕಟಪೂರ್ವ ಅಧ್ಯಕ್ಷ ಚಂದ್ರಗೌಡ ಪಾಟೀಲ ಮಾತನಾಡಿದರು.
ಮುಖ್ಯಕಾರ್ಯನಿರ್ವಾಹಕ ಚಂದ್ರಕಾತ ಪೆಡ್ನೇಕರ ನಿರೂಪಿಸಿ, ಸ್ವಾಗತಿಸಿ, ಸಭೆಗೆ ವಾರ್ಷಿಕ ವರದಿ ಮಂಡಿಸಿದರು.
ಈ ವೇಳೆ ಆಡಳಿತ ಮಂಡಳಿ ಸದಸ್ಯರುಗಳಾದ ಉಪಾಧ್ಯಕ್ಷ ಈರಣ್ಣಾ ಮಾರಿಹಾಳ, ಪ್ರಕಾಶ ಕಡತಾಳ, ರುದ್ರಪ್ಪ ಬಿದರಿ, ಕಲ್ಲಪ್ಪ ಕಾಂದ್ರೋಳ್ಳಿ, ರುದ್ರಪ್ಪ ಗಂದಿಗವಾಡ, ಅಮೃತ ಮಾಳೋಜಿ, ಅದೃಶ್ಯ ಪತ್ತಾರ, ಶ್ರೀಮತಿ ಲಕ್ಷ್ಮೀ ಸಕ್ರೋಜಿ, ಫಕ್ಕೀರಪ್ಪ ತಳವಾರ, ಈರಪ್ಪಾ ಮಂಡರ, ಶ್ರೀಮತಿ ಸುವರ್ಣಾಬಾಯಿ ಮಾಡಿಕ, ಡಿಸಿಸಿ ಬ್ಯಾಂಕ ಪ್ರತಿನಿಧಿ ಶಿವಾನಂದ ದೊಡಮನಿ ಸೇರಿದಂತೆ ಸಿಬ್ಬಂದಿ, ಶೇರುದಾರರು, ಸಾರ್ವಜನಿಕರು ಉಪಸ್ಥಿತರಿದ್ದರು.