ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ಕುಟುಂಬಸ್ಥರ ರೋದನೆ

ಚಿತ್ರದುರ್ಗ,ಜೂ.11: ಬೆಂಗಳೂರಿನಲ್ಲಿ ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಚಿತ್ರ ನಟ ದರ್ಶನ್ ಹತ್ತಿರ ಕರೆದುಕೊಂಡು ಹೋಗಿದ್ದೆ  ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ. ಇದೀಗ ಪೊಲೀಸ್ ಬಂಧನದಲ್ಲಿದ್ದಾನೆ.ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ನಗರದ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದು, ಈತನನ್ನು ಕಳೆದ ಶನಿವಾರ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಬಾಸ್ ಕರೆಯುತ್ತಿದ್ದಾರೆ ಎಂದು ಹೇಳಿ ಬೆಂಗಳೂರಿಗೆ ಕರೆದು ಕೊಂಡು ಹೋಗಿದ್ದಾನೆ. ಈ ಸಂಬಂಧ ಶನಿವಾರ ಮಧ್ಯಾಹ್ನ ಮನೆಗೆ ಪೋನ್ ಮೂಲಕ ಕರೆ ಮಾಡಿ, ಹಳೇಯ ಸ್ನೇಹಿತ ಬಂದಿದ್ದು, ಆತನ ಜೊತೆ ಊಟಕ್ಕೆ ಹೋಗುತ್ತೇನೆ. ಆದ್ದರಿಂದ ಮನೆಗೆ ಊಟಕ್ಕೆ ಬರುವುದಿಲ್ಲ ಎಂದು ಹೇಳಿರುವುದಾಗಿ ರೇಣುಕಾಸ್ವಾಮಿ ಪೋಷಕರು ಮಾಹಿತಿ ನೀಡಿದ್ದಾರೆ.ಚಿತ್ರದುರ್ಗದ ನಗರದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ ಕೆಇಬಿ ನಿವೃತ್ತ ಇಂಜಿನಿಯರ್ ಕಾಶಿನಾಥ್ ಶಿವನಗೌಡ್ರು, ರತ್ನ ಪ್ರಭಾ ದಂಪತಿಯ ಪುತ್ರನಾಗಿರುವ ರೇಣುಕಾಸ್ವಾಮಿ, ಕಳೆದ 1 ವರ್ಷದ ಹಿಂದೆಯಷ್ಟೆ ಸಹನಾ ಎಂಬ ಯುವತಿಯನ್ನು ವಿವಾಹವಾಗಿದ್ದರು.ರೇಣುಕಾ‌ಸ್ವಾಮಿ ಕಳೆದ 3-4 ವರ್ಷಗಳಿಂದ ನಗರದ ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದು, ನಾಲ್ಕೈದು ತಿಂಗಳಿಂದ ಐಯುಡಿಪಿ ಬಡಾವಣೆಯ ಫಾರ್ಮಸಿ ಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಕೆಲಸಕ್ಕೆ ಹೋಗಿದ್ದ ರೇಣುಕಾಸ್ವಾಮಿ ಶನಿವಾರ ಸಂಜೆಯ ನಂತರ ಕಿಡ್ನಾಪ್ ಆಗಿರುವ ಶಂಕೆ ವ್ಯಕ್ತವಾಗಿದೆ.ಕೆಲಸಕ್ಕೆ ಹೋಗಿದ್ದ ಮಗ ಮನೆಗೆ ಹಿಂದಿರುಗಿಲ್ಲ. ಇದು ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಬಾಲಾಜಿ ಬಾರ್ ಹತ್ತಿರ ಬೈಕ್ ಪತ್ತೆಯಾಗಿತ್ತು. ಇದರಿಂದ ಇಡೀ ಕುಟುಂಬ ಆತಂಕಗೊಂಡಿದ್ದರು.ಜೂ. 10 ರಂದು ಕಾಮಾಕ್ಷಿ ಪಾಳ್ಯ ವ್ಯಾಪ್ತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ನಿನ್ನೆ ಮಧ್ಯಾಹ್ನ ಕಾಮಕ್ಷಿಪಾಳ್ಯ ಪೊಲೀಸರು ಪೊಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಇಡೀ ಕುಟುಂಬ ದಿಗ್ಭ್ರಂತರಾಗಿದ್ದಾರೆ.ಕೊಲೆ ವಿಚಾರ ತಿಳಿಯುತ್ತಿದ್ದಂತೆ ಸ್ನೇಹಿತರು, ಹಿತೈಷಿಗಳು ಮನೆಯತ್ತ ದೌಡಾಯಿಸುತ್ತಿದ್ದಾರೆ.