ಕೂಡ್ಲಿಗಿ ಪಟ್ಟಣದಲ್ಲಿ ಘಟನೆ. ಬೀದಿನಾಯಿಗಳು ಕಚ್ಚಿ – ಇಬ್ಬರು ಮಕ್ಕಳಿಗೆ ಗಾಯ.
\
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.11 :- ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಮನೆಯಂಗಳದಲ್ಲಿ ಆಟವಾಡುತ್ತಿದ್ದ ಐದಾರು ವರ್ಷದ ಮಕ್ಕಳ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಘಟನೆ ಪಟ್ಟಣದ ಸಂಡೂರು ರಸ್ತೆ ಹಾಗೂ ಅಜಾದ್ ನಗರದಲ್ಲಿ ಜರುಗಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪಟ್ಟಣದ ಆಜಾದ್ ನಗರದ ವಾಸಿ ಫ್ಲೆಮ್ಮಿಂಗ್ ಕೆಲಸ ಮಾಡುವ ಭಾಷಾ ಎನ್ನುವವರ ಮಗ ರೆಹಾನ್ (6)  ಈ ಬಾಲಕನು ಮನೆಯ ಮುಂದೆ ಆಟವಾಡುತ್ತಿರುವಾಗ ಅಲ್ಲಿಯೇ ಇದ್ದ ಬೀದಿನಾಯಿಗಳು ಚಿನ್ನಾಟವಾಡುತ್ತಾ ಬಂದು ಬಾಲಕ ರೆಹಾನ್ ಮೇಲೆ ದಾಳಿ ನಡೆಸಿ ಆತನ ಬಲ ಕುಂಡಿಗೆ ಕಚ್ಚಿ ಗಾಯಗೊಳಿಸಿದೆ ತಕ್ಷಣ ಬಾಲಕನ ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದಿದೆ. ಇದೇ ರೀತಿಯಾಗಿ ಪಟ್ಟಣದ ಸಂಡೂರು ರಸ್ತೆಯ ಸಾರಿಗೆ ಸಂಸ್ಥೆ ಬಸ್  ಘಟಕದ ಮುಂದೆ ಇರುವ ಪಿಓಪಿ ಕೆಲಸ ಮಾಡುವ ಭೀಮಸಿಂಗ್ ಅವರ ಮಗ ಮಹಾವೀರ್ ಸಿಂಗ್ (5) ಈತನು ಸಹ ಮನೆ ಮುಂದೆ ಆಟವಾಡುವಾಗ ಏಕಾಏಕಿ ದಾಳಿ ನಡೆಸಿದ ಬೀದಿನಾಯಿ ಕಾಲಿಗೆ ಕಚ್ಚಿ ಕೈಗೆ ತನ್ನ ಉಗುರುಗಳಿಂದ ಪರಚಿ ಗಾಯಗೊಳಿಸಿದೆ ಈತನಿಗೂ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಹೇಳಲಾಗುತ್ತಿದ್ದೂ ಪಟ್ಟಣದ ಅನೇಕ ಚಿಕ್ಕಚಿಕ್ಕ ಮಕ್ಕಳ ಪಾಲಕ ಪೋಷಕರು ಬೀದಿನಾಯಿಗಳನ್ನು ಓಡಿಸಿ ಮಕ್ಕಳು ಆಟವಾಡುವಾಗ ಗಮನಿಸುವಂತೆ ತಿಳಿಸಲಾಗಿದೆ.
ಕೊಟ್ಟೂರು ರಸ್ತೆಯಲ್ಲಿ ಬೀದಿನಾಯಿಗಳದ್ದೆ  ಸಾಮ್ರಾಜ್ಯ :  ಪಟ್ಟಣದ ಕೊಟ್ಟೂರು ರಸ್ತೆ ಪಕ್ಕದಲ್ಲಿರುವ ಚಿಕನ್ ಮಟನ್ ಅಂಗಡಿಗಳು ಇದ್ದು ಅಲ್ಲಿನ ಮಾಂಸ ತಿನ್ನಲು ಬೀದಿನಾಯಿಗಳ ಹಿಂಡೇ ಇರುತ್ತವೆ ಅಲ್ಲದೆ ಅಲ್ಲಿ ಓಡಾಡುವ ಬೈಕ್ ಸವಾರರಿಗೆ ನಾಯಿಗಳು ಅಡ್ಡ ಬಂದು ಅನೇಕರು ಬಿದ್ದು ಗಾಯಗೊಂಡಿರುವುದರಲ್ಲಿ ನಾನು ಒಬ್ಬನಾಗಿದ್ದೇನೆ ಎನ್ನುತ್ತಾರೆ ಕೂಡ್ಲಿಗಿ ಪಟ್ಟಣದ ಲಂಕೇಶ್ ಎನ್ನುವ ಯುವಕ.
ಒಟ್ಟಿನಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಸಂಬಂದಿಸಿದ ಇಲಾಖೆಗಳು ಮುಂದಾಗಿ ಮಕ್ಕಳ ಹಾಗೂ ಬೈಕ್ ಸವಾರರಿಗಾಗುವ ಹೆಚ್ಚಿನ ಅನಾಹುತ ತಪ್ಪಿಸುವಂತೆ ಪಟ್ಟಣದ ಪ್ರಜ್ಞಾವಂತ ಯುವಕರು ಮನವಿ ಮಾಡುತ್ತಿದ್ದಾರೆ.