ಟಿ ಶಕ್ತಿ ಯೋಜನೆಗೆ ವರ್ಷ: ಕೆಕೆಆರ್‌ಟಿಸಿಗೆ124ಕೋಟಿ ಆದಾಯ.ಶಕ್ರಿ ಯೋಜನೆಯ ವಿಶೇಷತೆ
* ನಷ್ಟದಲ್ಲಿದ್ದ ನಿಗಮವನ್ನು ಮೇಲಕ್ಕೆತ್ತಿದ ಯೋಜನೆ
* ಒಂದು ವರ್ಷದಲ್ಲಿ ಹೊಸಪೇಟೆಗೆ 30 ಕೋಟಿ ಲಾಭ
* 240,80,38,233 ವಾರ್ಷಿಕ ವರಮಾನ
* 6.14ಕೋಟಿ ಪ್ರಯಾಣಿಕರ ಸಂಚಾರ.
* ಸಂಚಾರ ದಟ್ಟಣೆ ನಿಯಂತ್ರಿಸಲು 25ಹೊಸ ಬಸ್
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಜೂ11: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ‘ಶಕ್ತಿ’ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡಿದ್ದು,  (ಕೆಕೆಆರ್‌ಟಿಸಿ) 124,25,06,900 ಆದಾಯ ಸಂಗ್ರಹವಾಗಿ ನಿಗಮ ಲಾಭದತ್ತ ಮುಖಮಾಡಿದೆ.
‘ಶಕ್ತಿ’ ಯೋಜನೆ ನಷ್ಟದಲ್ಲಿದ್ದ ಕೆಕೆಆರ್‌ಟಿಸಿ ನಿಗಮವನ್ನು ಹಾನಿಯಿಂದ ಮೇಲಕ್ಕೆತ್ತಿ ಲಾಭದ ಹಳಿಗೆ ಹತ್ತುವಂತೆ ಮಾಡಿದೆ. ಮೊದಲಿನಿಂದಲು ಕಲ್ಯಾಣ ಕರ್ನಾಟಕದಲ್ಲಿ ಲಾಭದಲ್ಲಿದ್ದ  ಹೊಸಪೇಟೆ ವಿಭಾಗಕ್ಕೆ 30 ಕೋಟಿ ಲಾಭವನ್ನು ತಂದುಕೊಟ್ಟಿದೆ. ಅಲ್ಲದೆ  ಲಾಭ ಗಳಿಕೆಯಲ್ಲಿ ಮೊದಲ ಪಂಕ್ತಿಯಲ್ಲಿ ನಿಲುವಂತೆ ಮಾಡಿದೆ. ಇದು ಸುಮಾರು ಒಂದೂವರೆ ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ನಿವೃತ್ತಿ ವೇತನ ಪಾವತಿಸುವುದೂ ನಿಗಮಕ್ಕೆ ಸಾಧ್ಯವಾಗಿದೆ.
‘ಕಳೆದ ಒಂದು ವರ್ಷದಲ್ಲಿ ಹೊಸಪೇಟೆ ವಿಭಾಗದಲ್ಲಿ 6.14 ಕೋಟಿ ಪ್ರಯಾಣಿಕರು ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಈ ಪೈಕಿ ಟಿಕೆಟ್‌ ರಹಿತ ಮಹಿಳಾ ಪ್ರಯಾಣಿಕರ ಸಂಖ್ಯೆ 3.37 ಕೋಟಿ (ಶೇ 54.87) ಹಾಗೂ ಟಿಕೆಟ್‌ ನೀಡಿ ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ 2.77 ಕೋಟಿ (ಶೇ 45.13). ಮಹಿಳಾ ಪ್ರಯಾಣಿಕರಿಂದ ಬಂದ ವರಮಾನ 124.25 ಕೋಟಿ (ಶೇ 51.60) ಹಾಗೂ ಟಿಕೆಟ್‌ ಪ್ರಯಾಣಿಕರ ವರಮಾನ 116.55 ಕೋಟಿ (ಶೇ 48.40)’ ಎಂದು ಕೆಕೆಆರ್‌ಟಿಸಿ ಹೊಸಪೇಟೆ ವಿಭಾಗೀಯ ನಿಯಂತ್ರಣಾಧಿಕಾರಿ (ಡಿ.ಸಿ) ವಿ.ಎಸ್.ಜಗದೀಶ್  ತಿಳಿಸಿದರು.
ಶಕ್ತಿ ಕುಂದುತ್ತಿರುವ ಲಕ್ಷಣ:
ಶಕ್ತಿ ಯೋಜನೆಯಡಿ 3 ಕೋಟಿಗೂ ಮಿಕ್ಕಿ ಮಹಿಳೆಯರು ಸುಮಾರು 11 ತಿಂಗಳು ಭರ್ಜರಿಯಾಗಿಯೇ ತಿರುಗಾಡಿದ್ದು, ಕಳೆದ ಮೇ ತಿಂಗಳಲ್ಲಿ ಅವರ ಪ್ರಯಾಣದ ಪ್ರಮಾಣ ಕಡಿಮೆಯಾಗಿದೆ. ಮೇ ತಿಂಗಳಲ್ಲಿ ಮಹಿಳಾ ಪ್ರಯಾಣಿಕರಿಂದ 12.01 ಕೋಟಿ ವರಮಾನ ಬಂದಿದ್ದರೆ, ಟಿಕೆಟ್‌ ಪ್ರಯಾಣಿಕರಿಂದ 12.23 ಕೋಟಿ ವರಮಾನ ಬಂದಿದೆ.
ಕಳೆದ ಏಪ್ರಿಲ್‌ ತಿಂಗಳಲ್ಲಿ ‘ಶಕ್ತಿ’ ಪ್ರಯಾಣಿಕರಿಂದ ಸಂಸ್ಥೆಗೆ 12.14 ಕೋಟಿ ವರಮಾನ ಬಂದಿದೆ. ಇದು ಒಂದು ವರ್ಷದಲ್ಲಿ ಗಳಿಸಿದ ಗರಿಷ್ಠ ವರಮಾನದ ಮಾಸವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ₹11.12 ಕೋಟಿ ವರಮಾನ ಸಂಗ್ರಹವಾಗಿತ್ತು.
ಟ್ರಿಪ್‌ ಪ್ರಮಾಣ ಜಾಸ್ತಿ:
 ‘ಶಕ್ತಿ ಯೋಜನೆ ಜಾರಿಗೆ ಬಂದ ನಂತರ  ಜಿಲ್ಲೆಯಲ್ಲಿ  92 ಹೊಸ ಬಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಮೊದಲು ದಿನಕ್ಕೆ 1.40 ಲಕ್ಷ ಕಿ.ಮೀ.ನಷ್ಟಿದ್ದ ಟ್ರಿಪ್‌ ಪ್ರಮಾಣವನ್ನು 1.64 ಲಕ್ಷ ಕಿ.ಮೀ.ಗೆ ಹೆಚ್ಚಿಸಲಾಗಿದೆ. ಹೀಗಾಗಿ ಇರುವ ಬಸ್‌ಗಳಲ್ಲೇ ಹಾಗೂ ಇರುವ ಚಾಲಕರು, ಕಂಡಕ್ಟರ್‌ ಅವರಿಂದಲೇ ಅಧಿಕ ಸೇವೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಜಗದೀಶ್‌ ಮಾಹಿತಿ ನೀಡಿದರು.
ಹೊಸಪೇಟೆ–ಹಗರಿಬೊಮ್ಮನಹಳ್ಳಿ ನಡುವೆ ಹೆಚ್ಚುವರಿಯಾಗಿ 4 ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ಎದುರಾಗಿದ್ದ ಪ್ರಯಾಣಿಕರ ಬವಣೆಯನ್ನು ಬಹುತೇಕ ನೀಗಿಸಲಾಗಿದೆ ಎಂದು ಅವರು ಹೇಳಿದರು.
25 ಹೊಸ ಬಸ್‌: ‘ಡೆಲ್ಟ್‌’ ಯೋಜನೆಯಡಿಯಲ್ಲಿ ಹೊಸಪೇಟೆಗೆ ಈ ವರ್ಷಾಂತ್ಯದ ವೇಳೆಗೆ 25 ಹೊಸ ಬಸ್‌ಗಳು ಸೇರ್ಪಡೆಯಾಗಲಿವೆ. ಇದಕ್ಕೆ ಅನುದಾನದ ಕೊರತೆ ಸದ್ಯ ಕಾಡುತ್ತಿದ್ದು, ಶಾಸಕರನ್ನು ಸಂಪರ್ಕಿಸಲಾಗಿದೆ. ಶಾಸಕರ ನೆರವು, ಕೆಕೆಆರ್‌ಡಿಬಿ ಹಾಗೂ ಇತರ ಯಾವುದಾದರೂ ಯೋಜನೆಗಳ ಅಡಿಯಲ್ಲಿ ಈ ಬಸ್‌ ಖರೀದಿಗೆ ಅಗತ್ಯವಾದ ಮೊತ್ತದ ಅರ್ಧದಷ್ಟನ್ನು ನಿಗಮ ಪಾವತಿಸಬೇಕಿದ್ದು, ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸುತ್ತದೆ ಎಂದು ಕೆಕೆಆರ್‌ಟಿಸಿ ಮೂಲಗಳು ತಿಳಿಸಿವೆ.
ಶಕ್ತಿ ಯೋಜನೆಯಿಂದ ಕೆಕೆಆರ್‌ಟಿಸಿಗೆ ಬಹಳಷ್ಟು ಪ್ರಯೋಜನ ಆಗಿದೆ,  ಬಸ್‌ಗಳ ಸಂಖ್ಯೆಯ ಜತೆಗೆ ಹೆಚ್ಚುವರಿ  ಟ್ರಿಪ್‌ ಮಾಡಿಸುವ ಮೂಲಕ ಪ್ರಯಾಣಿಕ ಕಷ್ಟ ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ
ವಿ.ಎಸ್‌.ಜಗದೀಶ್‌, ಕೆಕೆಆರ್‌ಟಿಸಿ ಹೊಸಟೇಟೆ ವಿಭಾಗೀಯ ನಿಯಂತ್ರಣಾಧಿಕಾರಿ