ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.11: ಪ್ರಾಚೀನ ಶಿಲಾಯುಗ ಮತ್ತು ನವಶಿಲಾಯುಗದ ಕುರುಹುಗಳನ್ನು ಒಳಗೊಂಡ ಶಿಲಾಯುಗದ ಮೇಲೆ ಕೇಂದ್ರೀಕೃತವಾಗಿರುವ ಏಕೈಕ ವಸ್ತು ಸಂಗ್ರಹಾಲಯ, ಬಳ್ಳಾರಿಯಲ್ಕಿನ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯವಾಗಿದೆ.
ಇಲ್ಲಿ ನಿನ್ನೆ ಸಂಜೆ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ, ಇತಿಹಾಸ ಮತ್ತು ವಸ್ತು ಸಂಗ್ರಹಾಲಯಗಳಿಗೆ ಅವಿರ್ನಾಭಾವ ಸಂಬಂಧ ಹೊಂದಿದ್ದು, ವಸ್ತು ಸಂಗ್ರಹಾಲಯಗಳು ಮಾನವನು ತಾನು ಪ್ರಾಚೀನತೆಯಿಂದ ಆಧುನಿಕತೆಯೆಡೆಗೆ ಸಾಗಿಬಂದ ಪುರಾವೆ ತಿಳಿಸುತ್ತವೆ. ಹಾಗಾಗಿ ಇಂದಿನ ಪೀಳಿಗೆ ಇತಿಹಾಸದ ಮಹತ್ವ ಅರಿಯಬೇಕೆಂದು. ಈ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿಕ್ಷಣ ತಜ್ಞ ಗಣೇಶ್ ಎನ್.ದೇವಿ, ಈ ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಹಲವಾರು ಪುರಾತನ ಪಳೆಯುಳಿಕೆಗಳನ್ನು ಸಂಗ್ರಹಿಸಲಾಗಿದ್ದು, ಆಕರ್ಷಣೀಯ ವಸ್ತು ಸಂಗ್ರಹಾಲಯಗಳಲ್ಲಿ ಒಂದಾಗಿದೆ. ವೈಜ್ಞಾನಿಕತೆಯಿಂದ ನಾವೆಲ್ಲರೂ ಹಿಂದಿನ ಹಾದಿ ಸ್ಮರಿಸಬೇಕು. ತಂತ್ರಜ್ಞಾನ ಬದಲಾದರೂ ಪುರತಾನ ಸಂಸ್ಕೃತಿಯ ಜ್ಞಾನ ಬದಲಾಗುವುದಿಲ್ಲ, ಈ ಭಾಗದಿಂದ ಯುವ ಸಂಶೋಧನಾಕಾರರು ರಾಜ್ಯವ್ಯಾಪಿಯಲ್ಲಿ ಹೊರಹೊಮ್ಮಬೇಕೆಂದ ಅವರು
ವಸ್ತುಸಂಗ್ರಹಾಲಗಳ ಅಭಿವೃದ್ಧಿಗೆ ಕಾಯಕಲ್ಪ ಬೇಕಿದೆಂದು  ಅಭಿಪ್ರಾಯಪಟ್ಟರು.
ವಸ್ತು ಸಂಗ್ರಹಾಲಯದ ಗೌರವ ನಿರ್ದೇಶಕ ಪ್ರೊ.ರವಿ ಕೋರಿ ಶೆಟ್ಟರ್, ಇತಿಹಾಸದ ಹೆಜ್ಜೆ ಗುರುತುಗಳನ್ನು ಹಿಡಿದಿಟ್ಟುಕೊಳ್ಳುವುದು ವಸ್ತು ಸಂಗ್ರಹಾಲಯಗಳ ಕೆಲಸವಾಗಿದ್ದು, ಅದರಲ್ಲಿ ವೈದ್ಯಕೀಯ ಕ್ಷೇತ್ರವು ತನ್ನದೇ ಆದ ಸಹಭಾಗಿತ್ವನ್ನು ಹೊಂದಿದೆಂದರು.
ಈ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಶ್ರಮಿಸಿದ್ದ  ದಿ.ಪ್ರೊ.ಪಿ.ಸತ್ಯನಾರಾಯಣ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ,  ವಸ್ತು ಸಂಗ್ರಹಾಲಯದ ಸದಸ್ಯ ಸಂತೋಷ್ ಮಾರ್ಟಿನ್, ತಾಂತ್ರಿಕ ಸಹಾಯಕಿಗೌರಿ, ಬಳ್ಳಾರಿ ಹೆರಿಟೇಜ್ ಫೌಂಡೇಶನ್‍ನ ಟ್ರಸ್ಟಿ ಟಿ.ಜಿ.ವಿಠ್ಠಲ್  ಇನ್ನಿತರರು ಉಪಸ್ಥಿತರಿದ್ದರು.