ಚಾಲನಾ ಪರವಾನಿಗೆ ವಿತರಣೆ
ಬಾಗಲಕೋಟೆ,ಜೂ.11:ಸಮಾಜದಲ್ಲಿ ಮಹಿಳೆ ಸ್ವಾವಲಂಭಿ ಬದುಕು ಸಾಗಿಸಲು ವಾಹನ ಚಾಲನಾ ತರಬೇತಿ ನೀಡಿ ಲೈಸನ್ಸ್ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ತಿಳಿಸಿದರು.
ವಿದ್ಯಾಗಿರಿಯ ಬಿವಿವ ಸಂಘದ ಕೋಟೆಕ್ ಮಹಿಂದ್ರಾ ಬ್ಯಾಂಕ್ ಆರ್‍ಸೆಟಿ ಸಂಸ್ಥೆಯ ಸಭಾಭವನದಲ್ಲಿ ಹಮ್ಮಿಕೊಂಡ 24 ಮಹಿಳಾ ವಾಹನ ಚಾಲಕರಿಗೆ ತರಬೇತಿ ಪ್ರಮಾಣ ಪತ್ರ ಹಾಗೂ ಡ್ರೈವಿಂಗ್ ಲೈಸನ್ಸ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ಅದರಂತೆ ಮಹಿಳೆಯರು ವಾಹನ ಚಾಲನೆ ಮಾಡಲು ಮುಂದೆ ಬಂದು ಸ್ವಾವಲಂಭಿಗಳಾಗುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರೇ ಮನೆ ಮನೆಗೆ ತೆರಳಿ ಹಸಿ ಮತ್ತು ಒಣ ಕಸ ಸಂಗ್ರಹಣೆ ಹೊತೆಗೆ ಸ್ವಚ್ಛ ವಾಹಿನಿ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವುದು ತುಂಬಾ ಮಹತ್ವದ್ದಾಗಿದೆ. ಎನ್.ಆರ್.ಎಲ್.ಎಂ ಯೋಜನೆಯಡಿ ಇಲ್ಲಿಯವರೆಗೆ ಜಿಲ್ಲೆಯ 195 ಗ್ರಾಮ ಪಂಚಾಯತಿಗಳ ಪೈಕಿ 177 ಗ್ರಾಮ ಪಂಚಾಯತಿಗಳಲ್ಲಿ ಮಹಿಳೆಯರಿಗೆ ವಾಹನಾ ಚಾಲನಾ ತರಬೇತಿ ಹಾಗೂ ಡ್ರೈವಿಂಗ್ ಲೈಸನ್ಸ್ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ಕೋಟೆಕ್ ಮಹಿಂದ್ರಾ ಬ್ಯಾಂಕ್ ಆರ್‍ಸೆಟಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಿ.ಎಸ್.ಅಂಗಡಿ ಮಾತನಾಡಿ ನಮ್ಮ ಕೇಂದ್ರದಲ್ಲಿ ಉತ್ತಮ ತರಬೇತಿ ನೀಡಲಾಗುತ್ತಿದ್ದು, ತರಬೇತಿ ಪಡೆದುಕೊಂಡ ಮಹಿಳೆಯರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಕಾರ್ಯಕ್ರಮದಲ್ಲಿ ಆರ್‍ಸೆಟ್ ಸಂಸ್ಥೆಯ ನಿರ್ದೇಶಕ ಶರಣಬಸವ ಹೊನ್ನೂರ, ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಗೋಪಾಲ ಸೇರಿದಂತೆ ಇತರರು ಉಪಸ್ಥಿತರಿದ್ದರು.