ಹೆಚ್.ಡಿ.ಕೆ ಪ್ರಮಾಣವಚನ ಸ್ವೀಕಾರ: ಕಾರ್ಯಕರ್ತರ ಸಂಭ್ರಮ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.11: ಪ್ರಧಾನಿ ನರೇಂದ್ರಮೋದಿ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಮಂಡ್ಯದ ಸಂಸದ ಹೆಚ್.ಡಿ.ಕುಮಾರಸ್ವಾಮಿ ಮೋದಿಯವರ ನಿರೀಕ್ಷೆಗಿಂತ ಮಿಗಿಲಾಗಿ ಕೆಲಸ ಮಾಡಲಿದ್ದಾರೆ ಎಂದು ಶಾಸಕರ ಸಹೋದರ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್ ತಿಳಿಸಿದರು.
ಅವರು ಮಂಡ್ಯ ಸಂಸದ ಹೆಚ್.ಡಿ.ಕುಮಾರಸ್ವಾಮಿಯವರು ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಎಂ.ಕೆ.ಬೊಮ್ಮೇಗೌಡ ವೃತ್ತದಲ್ಲಿ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿ ಮಾತನಾಡಿದರು.
ನವದೆಹಲಿಯ ರಾಷ್ಟ್ರಪತಿ ಭವನದ ಮುಂಭಾಗ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ನಂತರ ಶಾಸಕರ ಸಹೋದರ ಹೆಚ್.ಟಿ.ಲೋಕೇಶ್ ನೇತೃತ್ವದಲ್ಲಿ ಜಮಾವಣೆಗೊಂಡ ಮೈತ್ರಿ ಪಕ್ಷಗಳ ಕಾರ್ಯಕರ್ತರು ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಹಾಗೂ ಅಂಗಡಿಗಳ ಮಾಲೀಕರು ಗ್ರಾಹಕರುಗಳಿಗೆ ಸಿಹಿ ವಿತರಿಸಿ ಮಾಜಿ ಪ್ರಧಾನಿ ದೇವೇಗೌಡ, ಹೆಚ್.ಡಿ.ಕೆ ಹಾಗೂ ನರೇಂದ್ರಮೋದಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಈ ಕುರಿತು ಮಾತನಾಡಿದ ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಹೆಚ್.ಟಿ.ಲೋಕೇಶ್ ಕರುನಾಡಿನ ದೊರೆ, ಎರಡು ಬಾರಿ ಮುಖ್ಯಮಂತ್ರಿಯಾಗಿ ಬಡವರ, ಸಂಕಷ್ಟದಲ್ಲಿರುವವರ ಪರ ಮತ್ತು ರೈತರ ಏಳಿಗೆಗಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ ಕೀರ್ತಿ ಕುಮಾರಣ್ಣನವರಿಗೆ ಸಲ್ಲುತ್ತದೆ. ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಕುಮಾರಣ್ಣನವರಿಗೆ ನಿರೀಕ್ಷೆಗೂ ಮೀರಿ ಮತನೀಡಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ಮೈತ್ರಿ ಅಭ್ಯರ್ಥಿಗೆ ಬಹಳ ಅಂತರದ ಮತಗಳನ್ನು ನೀಡಿದ್ದಾರೆ. ಕುಮಾರಣ್ಣ ಗೆದ್ದು ಕೇಂದ್ರದಲ್ಲಿ ಮಂತ್ರಿಯಾಗುತ್ತಾರೆಂಬ ಭರವಸೆ ಇಂದು ಈಡೇರಿದೆ.
ಪ್ರಧಾನಿ ನರೇಂದ್ರಮೋದಿಯವರು ಕುಮಾರಣ್ಣ ಮುಖ್ಯಂಮಂತ್ರಿಯಾಗಿದ್ದ ಕಾಲದಲ್ಲಿನ ಆಡಳಿತವನ್ನು ಮೆಚ್ಚಿದ್ದು ಅವರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿಯನ್ನಾಗಿ ಮಾಡಿದ್ದಾರೆ. ಮೋದಿಯವರ ನಿರೀಕ್ಷೆಗೂ ಮೀರಿ ಉತ್ತಮ ಕೆಲಸ ಮಾಡಲಿದ್ದಾರೆ. ಅವರಿಗೆ ಮಾಜಿ ಪ್ರಧಾನಿ ದೇವೇಗೌಡರ ಮಾರ್ಗದರ್ಶನ, ಆಡಳಿತದ ಅನುಭವ, ನಾಡಿನ ಜನತೆಯ ಸಂಕಷ್ಟಗಳ ಅರಿವಿದೆ. ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ಇಡೀ ದೇಶವೇ ಮೆಚ್ಚುವಂಥಹ ಕೆಲಸಗಳನ್ನು ಮಾಡಲಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇದೇ ರೀತಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿಯೂ ಮುಂದುವರಿಯಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಅಖಿಲಬಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ವಕೀಲ ಧನಂಜಯ, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಜೆಡಿಎಸ್ ಮುಖಂಡರಾದ ಬೇಲದಕೆರೆಕೃಷ್ಣ, ಜೈನ್ನಹಳ್ಳಿಸಂತೋಷ್, ಶಾಸಕರ ಆಪ್ತಸಹಾಯಕ ಪ್ರತಾಪ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.