ಕೆಂದ್ರ ಸಚಿವರಾದ ಎಚ್‍ಡಿಕೆ: ಸಂಭ್ರಮಾಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.11:- ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರ ಕಟೌಟ್‍ಗೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಸೋಮವಾರ ಬೆಳಗ್ಗೆ ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಹಾಗೂ ಮುಖಂಡರು ಪರಸ್ಪರ ಸಿಹಿ ಹಂಚಿ, ಜೆಡಿಎಸ್ ಹಾಗೂ ಬಿಜೆಪಿ ಪರ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡಿದರು.
ಈ ವೇಳೆ ಮಾತನಾಡಿದ ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ದೇವೇಗೌಡರು ಎಲ್ಲಿದ್ದಾರೆ, ಜೆಡಿಎಸ್ ಪಕ್ಷ ಎಲ್ಲಿದೆ, ಎಂದು ಹೇಳುತ್ತಿದ್ದವರಿಗೆ ಇದೀಗ ಉತ್ತರ ಸಿಕ್ಕಿದೆ. ರಾಜ್ಯದ ಜನರೇ ಅವರಿಗೆ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಮಾಜಿ ಮೇಯರ್ ಆರ್.ಲಿಂಗಪ್ಪ ಮಾತನಾಡಿ, ಮಂಡ್ಯ ಜನತೆಗೆ ಮೊದಲು ನಾವು ಕೃತಜ್ಞತೆ ಹೇಳುತ್ತೇವೆ. ಕಾಂಗ್ರೆಸ್ ಪಕ್ಷದ ಆಸೆ, ಆಮಿಷಗಳಿಗೆ ಬಲಿಯಾಗದೆ ಒಗ್ಗಟ್ಟಾಗಿ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರ ಮಂತ್ರಿಯಾಗಲು ಸಹಕಾರ ನೀಡಿದ್ದಾರೆ ಎಂದರು.
ಕುಮಾರಸ್ವಾಮಿ ಅವರಿಗೆ ಬಡವರ, ರೈತರ ಪರ ಕೆಲಸ ಮಾಡಲು ಉತ್ಸಾಹವಿದೆ. ಹೀಗಾಗಿ ಅವರಿಗೆ ಕೇಂದ್ರ ಸಂಪುಟದಲ್ಲಿ ಕೃಷಿ ಅಥವಾ ನೀರಾವರಿ ಖಾತೆ ದೊರಕಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಅದರ ಹೊರತಾಗಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವ ಶಕ್ತಿ ಅವರಿಗಿದೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಶ್ರೀಧರ್, ಎಸ್.ಬಾಲು, ರಮೇಶ್(ರಮಣಿ), ಪ್ರೇಮಾ ಶಂಕರೇಗೌಡ, ಮೈಲ್ಯಾಕ್ ಮಾಜಿ ಅಧ್ಯಕ್ಷ ಕೃಷ್ಣ, ರವಿಚಂದ್ರೇಗೌಡ, ಎನ್.ಎಂ.ರಾಮು, ಎಸ್.ಮಂಜುನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಜನರಿಗೆ ಉಪಾಹಾರ ವಿತರಿಸಲಾಯಿತು.