ಅಭಿವೃದ್ಧಿ ಕೆಲಸಗಳ ಜತೆಗೆ ಪಕ್ಷ ಸಂಘಟನೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.11:- ಚಿಕ್ಕೋಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಜಿಲ್ಲಾ ಗ್ರಾಮಾಂತರ ಮತ್ತು ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಸಂಸದರಾಗಿ ಆಯ್ಕೆಯಾದ ಬಳಿಕ ಸಹೋದರ ರಾಹುಲ್ ಜಾರಕಿಹೊಳಿ ಅವರೊಂದಿಗೆ ಮೈಸೂರಿನ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಅವರು, ಕಾಂಗ್ರೆಸ್ ಶಾಸಕರು, ಮುಖಂಡರಿಂದ ಸನ್ಮಾನ ಸ್ವೀಕರಿಸಿದರು. ಬಳಿಕ ಮಾತನಾಡಿದ ಪ್ರಿಯಾಂಕಾ ಜಾರಕಿಹೊಳಿ, ತಂದೆಯವರಾದ ಸತೀಶ್ ಜಾರಕಿಹೊಳಿ ಸೇರಿ ಪಕ್ಷದ ಎಲ್ಲ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ಅಭಿವೃದ್ಧಿ ಕೆಲಸಗಳ ಜತೆಗೆ ಕಾಂಗ್ರೆಸ್ ಪಕ್ಷ ಸಂಘಟನೆಗೂ ಶ್ರಮಿಸುತ್ತೇನೆ ಎಂದು ನುಡಿದರು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಜನತೆ 90 ಸಾವಿರ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದಾರೆ. ಕ್ಷೇತ್ರದ ಜನತೆ ಸ್ವಂತ ಮಗಳಂತೆ ಪ್ರೀತಿ ತೋರಿದರು. ನಾನು ರಾಜಕೀಯ ಪ್ರವೇಶಿಸಿದ್ದು ಮಹಿಳೆಯರಿಗೆ ಸಂತೋಷ ತಂದಿದೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರ ಮಕ್ಕಳು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವಲ್ಲ. ಅವರಂತೆ ಜನ ಸಾಮಾನ್ಯರ ಪರವಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು. ನೂತನವಾಗಿ ಆಯ್ಕೆಯಾಗಿರುವ ಪ್ರಿಯಾಂಕಾ ಅವರು ಸಂಸತ್ತಿನಲ್ಲಿ ಮಹಿಳೆಯರ ದನಿಯಾಗಲಿ. ಪಕ್ಷ ಸಂಘಟನೆಗೂ ಶ್ರಮಿಸಲಿ ಎಂದು ಕಿವಿ ಮಾತು ಹೇಳಿದರು.
ಶಾಸಕ ದರ್ಶನ್ ಧ್ರುವ ನಾರಾಯಣ ಮಾತನಾಡಿ, 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಅತ್ಯಂತ ಕಿರಿಯ ಶಾಸಕನಾಗಿ ಆಯ್ಕೆಯಾಗಿದ್ದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅತ್ಯಂತ ಕಿರಿಯ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಜನಪ್ರತಿನಿಧಿಯಾಗಿ ಉತ್ತಮ ಕೆಲಸ ಮಾಡಲೆಂದು ಶುಭ ಹಾರೈಸಿದರು.
ತಂದೆಯವರಾದ ಧ್ರುವನಾರಾಯಣ ಅವರು ಕಾಲವಾಗಿ ಒಂದು ವರ್ಷವಾಗಿದೆ. ಅಲ್ಲಿಂದಲೂ ಹಿರಿಯ ಸಚಿವರಾದ ಸತೀಶ್ ಜಾರಕಿಹೊಳಿ ಅವರು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್ ಮಾತನಾಡಿ, ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಿಯಾಂಕಾ ಅವರ ಗೆಲುವು ಸಚಿವರಾದ ಸತೀಶ್ ಜಾರಕಿಹೊಳಿ ಅವರ ನೈತಿಕ ಗಟ್ಟಿತನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜ್ಞಾನ ಪ್ರಕಾಶ ಸ್ವಾಮೀಜಿ ಆಶೀರ್ವಾದ
ನೂತನ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಗಾಂಧಿನಗರದಲ್ಲಿರುವ ಉರಿಲಿಂಗಿಪೆದ್ದಿ ಮಠಕ್ಕೆ ಭೇಟಿ ನೀಡಿ ಜ್ಞಾನ ಪ್ರಕಾಶ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಚಾಮರಾಜನಗರದ ಲೇಖಕ ಕೆ.ಶ್ರೀಧರ್ (ಕೆ.ಸಿರಿ) ಅವರ ಕೃತಿಗಳಾದ ಒಡಪಾಡು, ದೊಡ್ಡಸಂಪಿಗೆ, ಗೌರಿ ಮಕ್ಕಳು ಮತ್ತು ಪಂಚಮುಖಿ ಪುಸ್ತಕಗಳ ಮುಖಪುಟ ಅನಾವರಣಗೊಳಿಸಿದರು. ಕಲಾವಿದರಾದ ಜೆ. ಮೂರ್ತಿ ಮುಡಿಗುಂಡ, ಗಾಯಕ ರವಿಕುಮಾರ್ ಉಪಸ್ಥಿತರಿದ್ದರು. ಸುಣ್ಣದ ಕೇರಿಯ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ಅವರ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ಪ್ರಿಯಾಂಕಾ ಅವರು ಅಭಿನಂದನೆ ಸ್ವೀಕರಿಸಿದರು. ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಸತೀಶ್ ಜಾರಕಿಹೊಳಿ, ಪ್ರಿಯಾಂಕಾ, ರಾಹುಲ್ ಜಾರಕಿಹೊಳಿ ಪರ ಘೋಷಣೆ ಕೂಗಿದರು.
ಶಾಸಕ ಅನಿಲ್ ಚಿಕ್ಕಮಾದು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಪುಷ್ಪಲತಾ ಚಿಕ್ಕ ಣ್ಣ, ಲತಾ ಸಿದ್ದಶೆಟ್ಟಿ, ಈಶ್ವರ್ ಚಕ್ಕಡಿ, ಸೇವಾದಳದ ಗಿರಿಶ್ ಮುಂತಾದವರು ಭಾಗವಹಿಸಿದ್ದರು.