ಇಂಗ್ಲೀಷ್‍ನಲ್ಲಿ ಪ್ರಮಾಣ ವಚನ: ಕರವೇ ಕಾವಲು ಪಡೆ ಆಕ್ರೋಶ
ಕಲಬುರಗಿ,ಜೂ.10-ಕೇಂದ್ರ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎಚ್.ಡಿ.ಕುಮಾರಸ್ವಾಮಿ ಅವರು ಇಂಗ್ಲೀಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡ ಭಾಷೆಗೆ ಅವಮಾನಿಸಿದ್ದಾರೆ ಎಂದು ಕರವೇ ಕಾವಲು ಪಡೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಂಡ್ಯ ಜಿಲ್ಲೆ ಸಕ್ಕರೆಯ ನಾಡು, ನೀರು ಕೇಳಿದರೆ ಪಾನಕ ಕೊಡುವ ಬೀಡು ಈ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ತಿಗೆ ಹೋದ ಮಾಜಿ ಮುಖ್ಯಮಂತ್ರಿ ಇಂಗ್ಲೀಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಕನ್ನಡವನ್ನು ಅಪಮಾನಿಸಿದ್ದಾರೆ.
ಕುಮಾರಸ್ವಾಮಿ ಅವರು ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅವರು ತಮ್ಮ ಹೃದ್ಮಂದಿರದಲ್ಲಿರುವ ಕನ್ನಡಾಭಿಮಾನವನ್ನು ಹೊರಹಾಕಿದ್ದಾರೆ ಎಂದು ವ್ಯಂಗ ವಾಡಿರುವ ಅವರು, ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದಾಗ ಕನ್ನಡ ಭಾಷೆಯಲ್ಲಿ ಆರಂಭಿಕ ಮಾತುಗಳನ್ನಾಡುತ್ತಾರೆ. ಅವರದ್ದಾದರೂ ಕುಮಾರಸ್ವಾಮಿ ನೋಡಿ ಕಲಿಯಲಿ ಎಂದು ಕುಟುಕಿದ್ದಾರೆ.