ಬಾಲಕಿ ಅತ್ಯಾಚಾರಿಗಳಿಗೆ 30 ವರ್ಷ ಜೈಲು
ಕಲಬುರಗಿ,ಜೂ 10: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ್ದರಿಂದ ಇಬ್ಬರು ಅಪರಾಧಿಗಳಿಗೆ ಅಪರ ಜಿಲ್ಲಾ ಮತ್ತು ಸತ್ರ ( ವಿಶೇಷ ಪೋಕ್ಸೋ) ನ್ಯಾಯಾಲಯ -ಎಫ್.ಟಿ ಎಸ್ ಸಿ. 1 ನ್ಯಾಯಾಧೀಶರಾದ ಯಮನಪ್ಪ ಬಮ್ಮಣಗಿ ಅವರು 30 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿದ್ದಾರೆ.
ಕಲಬುರಗಿ ಮಿಲ್ಲತ್ ನಗರದ ಪಿಯುಸಿ ವಿದ್ಯಾರ್ಥಿ ಸೈಯದ್ ಅಮಾನ್ ಅಲಿ (19) ಮತ್ತು ಬಿಲಾಲಾಬಾದದ ಖಾಸಗಿ ನೌಕರ ಸೈಯದ್ ತಲಹಾ ನುಮಾನ್ ( 22) ಶಿಕ್ಷೆಗೊಳಗಾದವರು.
2020 ರ ಫೆಬ್ರವರಿ 10 ರಂದು ಈ ಇಬ್ಬರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ,ಘಟನೆ ವಿಡಿಯೋ ತೆಗೆದಂತೆ ನಟಿಸಿ ಅತ್ಯಾಚಾರ ನಡೆಸಿದ್ದನ್ನು ಯಾರಿಗಾದರೂ ಹೇಳಿದರೆ ವಿಡಿಯೋ ಲೀಕ್ ಮಾಡಿ ಮರ್ಯಾದೆ ತೆಗೆಯುತ್ತೇವೆ .ನಿನ್ನ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಇದಾದ ನಂತರ ಹಲವು ಸಲ ಅತ್ಯಾಚಾರ ಎಸಗಿದ್ದರು.ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ,ತನಿಖಾಧಿಕಾರಿ ದಿಲೀಪಕುಮಾರ ಸಾಗರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನೊಂದ ಬಾಲಕಿಗೆ ಕಾನೂನು ಪ್ರಾಧಿಕಾರದಿಂದ 7 ಲಕ್ಷ ರೂ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ ತುಪ್ಪದ ಅವರು ವಾದ ಮಂಡಿಸಿದ್ದರು.