ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರ ಸನ್ಮಾನ
ಬೀದರ :ಜೂ.10: ನಗರದ ವಿವೇಕಾನಂದ ಬಡಾವಣೆ ಹಾಗು ಹೇಮರಡ್ಡಿ ಮಲ್ಲಮ್ಮ ಬಡಾವಣೆ ಮುಖ್ಯ ರಸ್ತೆ ಎಡ ಬಲ ನಿವಾಸಿಗಳಿಂದ ಪರಿಸರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರ ಸನ್ಮಾನ ಮಾಡಲಾಯಿತು.
ಶ್ರೀಮತಿ ಜೈಶೀಲಾ ವೈಜನಾಥ ರಡ್ಡಿ ಮಾಜಿ ಜಿಲ್ಲಾ ಪಂಚಾಯತ್ ಅದ್ಯಕ್ಷರ ಅಧ್ಯಕ್ಷತೆಯಲ್ಲಿ ಬಡಾವಣೆಯ ಮಹಿಳೆಯರು ಮತ್ತು ಪುರುಷರು ಪೌರಕಾರ್ಮಿಕರ ಹಣೆಗೆ ಕುಂಕುಮ ಹಚ್ಚಿ, ಟೋಪಿ ಇಟ್ಟು ,ಶಾಲು ಹೊದಿಸಿ ಮಾಲಾಪರ್ಣೆ ಮಾಡಿ ಆರತಿ ಮಾಡಿದರು. ಪರಿಸರಕ್ಕೆ ಜಯವಾಗಲಿ ಮತ್ತು ಪೌರಕಾರ್ಮಿಕರಿಗೆ ಜಯವಾಗಲಿ, ಜೈ ಘೋಷ ಹೇಳಿ ಪುಷ್ಪದಳಗೆರೆದರು. ವಿವೇಕಾನಂದ ಬಡಾವಣೆ ಗೌರವಾಧ್ಯಕ್ಷರು ಹಾಗು ಪರಿಸರ ಚಿಂತಕರಾದ ಪೆÇ್ರ. ಎಸ್.ವಿ. ಕಲ್ಮಠ ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾತನಾಡುತ್ತ ಪರಿಸರ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಸೇವೆ ತುಂಬಾ ಮಹತ್ವದ್ದಾಗಿದೆ. ಪೌರಕಾರ್ಮಿಕರು ತಮ್ಮ ಆರೋಗ್ಯಕ್ಕಿಂತ ಪರಿಸರ ಸ್ವಚ್ಛತೆ ಕಡೆಗೆ ಹೆಚ್ಚು ಗಮನಕೊಡುತ್ತಾರೆ. ಪ್ರತಿನಿತ್ಯವು ತಪ್ಪದೆ ಬೀದಿ ಸ್ವಚ್ಛಮಾಡುವುದು ಹಾಗು ಮನೆ ಮನೆಗೆ ಹೋಗಿ ಗೃಹಕಸ ಸಂಗ್ರಹ ಮಾಡುತ್ತಾರೆ. ಕೊರೋನ ಮಹಾಮಾರಿ ಆವರಿಸಿದಾಗ ಹಿಂದು ಮುಂದು ನೋಡದೆ ತಮ್ಮ ಜೀವದ ಹಂಗು ತೊರೆದು ಕೈಯಿಂದ ಕೊಳಕು ಕಸವನ್ನು ಸಂಗ್ರಹಮಾಡಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯವಾಗಿದೆ. ಈ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಕೈಯಿಂದ ಪೌರಕಾರ್ಮಿಕರ ಪಾದ ತೊಳೆದು ಪೂಜಿಸಿರುವುದು ಪರಿಸರಕ್ಕೆ ಸಲ್ಲಿಸಿರುವುದು ಹೆಮ್ಮೆಯ ವಿಷಯ. ಎಲ್ಲಿ ಸ್ವಚ್ಛತೆ ಇರುತ್ತದೆ; ಅಲ್ಲಿ ಪರಮಾತ್ಮನಿರುತ್ತಾನೆ. ಪೌರಕಾರ್ಮಿಕರು ಸ್ವಚ್ಛತೆ ಸೇವೆ ಮಾಡುವ ಮೂಲಕ ಪರಮಾತ್ಮನ ಸೇವೆಯಲ್ಲಿ ತೊಡಗಿರುತ್ತಾರೆ. ಪೌರಕಾರ್ಮಿಕರ ಸೇವೆಗೆ ಅವರನ್ನು ಗೌರವಿಸುವುದು ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಬಹಳಷ್ಟು ಕಾರ್ಮಿಕರ ಸೇವೆ ತಾತ್ಕಾಲಿಕ ಹಾಗು ಗುತ್ತಿಗೆ ಆಧಾರಿತವಾಗಿದೆ. ಸರಕಾರ ಇಂಥವರ ಸೇವೆಯನ್ನು ಖಾಯಂಗೊಳಿಸಬೇಕು. ಅವರ ಆರೋಗ್ಯ ಹಾಗು ಕುಟುಂಬ ಕ್ಷೇಮಕ್ಕಾಗಿ ವಿಶೇಷ ಸವಲತ್ತುಗಳನ್ನು ನೀಡಬೇಕು ಎಂದು ಕಲ್ಮಠ ಅವರು ನುಡಿದರು.
ಶ್ರೀಮತಿ ರಾಜೇಶ್ವರಿ ಸಂಗಯ್ಯ ಕಲ್ಮಠ, ಸೂರ್ಯಕಾಂತ ಮಾಳಗೆ , ವಿಜಯಕುಮಾರ ಭೋಗಲೆ, ಶ್ರೀಮತಿ ಭಾರತಿ, ಶ್ರೀಮತಿ ಸಂಗೀತಾ, ಪಂಚಾಕ್ಷರಿ , ಚಿ. ಸಿದ್ಧಲಿಂಗ ಇತರರು ಭಾಗವಹಿಸಿದರು.