ಅಭಿವೃದ್ಧಿಶೀಲ ಭಾರತ ನಿರ್ಮಾಣಕ್ಕೆಮೋದಿ 3.0 ಆಡಳಿತ ಮುನ್ನುಡಿ
ಬೀದರ್: ಜೂ.10:ನರೇಂದ್ರ ಮೋದಿ ಅವರ ಮೂರನೇ ಅವಧಿ ಆಡಳಿತ ಭಾರತದ ಅಭಿವೃದ್ಧಿಗೆ ಹೊಸ ಆಯಾಮ ನೀಡಲಿದೆ. ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಸುಧಾರಿಸಲಿದ್ದು, ಅಭಿವೃದ್ಧಿಶೀಲ ಭಾರತಕ್ಕೆ ಮುನ್ನುಡಿ ಬರೆಯಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆದ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ಮೋದಿ ಅವರು ಮೂರನೇ ಸಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವುದು ಹಳ್ಳಿಯಿಂದ ಹಿಡಿದು ದಿಲ್ಲಿವರೆಗೆ ಎಲ್ಲಿಲ್ಲದ ಸಂಭ್ರಮಕ್ಕೆ ಕಾರಣವಾಗಿದೆ. ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಈ ಅವಧಿಯಲ್ಲಿ ಮಾದರಿ ಆಡಳಿತ ನೀಡುವ ವಿಶ್ವಾಸ ಜನರಲ್ಲಿ ಮನೆ ಮಾಡಿದೆ. ಹಿಂದಿನ ಹತ್ತು ವರ್ಷ ಮೋದಿ ಅವರ ನೇತೃತ್ವದಲ್ಲಿ ಆಗಿರುವ ಐತಿಹಾಸಿಕ ಅಭಿವೃದ್ಧಿ ಕೆಲಸಗಳೇ ಜನರಲ್ಲಿ ಈ ವಿಶ್ವಾಸ, ನಂಬಿಕೆ ಗಟ್ಟಿಗೊಳ್ಳಲು ಪ್ರಮುಖ ಕಾರಣ ಎಂದು ಇಲ್ಲಿ ಹೊರಡಿಸಿದ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ದೇಶ ಸ್ವಾತಂತ್ರ್ಯದ ನಂತರ ನೆಹರು ಅವರ ಬಳಿಕ ಮೂರನೇ ಬಾರಿ ಪ್ರಧಾನಿ ಹುದ್ದೆಗೇರಿದ ಖ್ಯಾತಿಗೆ ಮೋದಿ ಅವರು ಭಾಜನರಾಗಿದ್ದಾರೆ. ನಾಲ್ಕು ಸಲ ಗುಜರಾತ್ ಸಿಎಂ ಆಗಿ, ಈಗಾಗಲೇ ಎರಡು ಸಲ ಪ್ರಧಾನಿಯಾಗಿ ಮಾದರಿಯಾದ ಹಾಗೂ ಪಾರದರ್ಶಕವಾದ ಆಡಳಿತ ಕೊಟ್ಟ ಮೋದಿ ಅವರ ನೇತೃತ್ವದಲ್ಲಿ ಎನ್ ಡಿಎ ಪಕ್ಷಗಳ ನಾಯಕರು ಅದಮ್ಯ ವಿಶ್ವಾಸವಿಟ್ಟು ಮೂರನೇ ಅವಧಿಗೆ ಭರಪೂರ ಸಾಥ್ ನೀಡಿದ್ದಾರೆ. ಹೀಗಾಗಿ ಈ ಸರ್ಕಾರ ಪೂರ್ಣ ಅವಧಿ ಅಭಿವೃದ್ಧಿಪರ ಆಡಳಿತ ನೀಡುವುದು ಖಚಿತವಾಗಿದೆ. ಮೂರಂಕಿ ದಾಟದ ಕಾಂಗ್ರೆಸ್ ನವರಿಂದ ಯಾವುದೇ ರಾಜಕೀಯ ನೌಟಂಕಿ ನಡೆಯಲ್ಲ. ಇಂಡಿ ಒಕ್ಕೂಟ ಬರುವ ದಿನಗಳಲ್ಲಿ ತಾನಾಗಿಯೇ ಛಿದ್ರಗೊಳ್ಳಲಿದೆ. ಯಾವುದೇ ಮಿಷನ್, ಯಾವುದೇ ವಿಷನ್ ಇಲ್ಲದ ಇಂಡಿ ಒಕ್ಕೂಟಕ್ಕೆ ದೇಶದ ಜನರು ಯಾವತ್ತೂ ಸ್ವೀಕಾರ ಮಾಡುವುದಿಲ್ಲ. ಅವರ ಯಾವುದೇ ಷಡ್ಯಂತ್ರಗಳು ಮೋದಿ ಅವರಂಥ ಸಮರ್ಥ ಹಾಗೂ ಜಗಮೆಚ್ಚಿದ ನಾಯಕರೆದುರು ಠುಸ್ ಆಗಲಿವೆ ಎಂದು ಬೆಲ್ದಾಳೆ ಹೇಳಿದ್ದಾರೆ.
ಕರ್ನಾಟಕಕ್ಕೆ ಐದು ಮಂತ್ರಿ ಸ್ಥಾನ ಸಿಕ್ಕಿರುವುದು ಎಲ್ಲಿಲ್ಲದ ಹರ್ಷ ತಂದಿದೆ. ರಾಜ್ಯದ ಜನತೆ ಎನ್ ಡಿಎ 19 ಸ್ಥಾನ ಕಲ್ಪಿಸಿದ್ದಕ್ಕೆ ಪ್ರತಿಯಾಗಿ ವರಿಷ್ಠರು ಇಷ್ಟೊಂದು ಮಂತ್ರಿ ಸ್ಥಾನ ನೀಡಿ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಇದು ಪೂರಕವಾಗಲಿದೆ. 2019ರಲ್ಲಿ ನಾನು ಬಿಜೆಪಿ ಜಿಲ್ಲಾ ಅಧ್ಯಕ್ಷನಿದ್ದಾಗ ಮೋದಿ ಅವರ ಪದಗ್ರಹಣ ಸಮಾರಂಭಕ್ಕೆ ಹಾಜರಾಗಿದ್ದೆ. ಇದೀಗ ನಾನು ಶಾಸಕನಾಗಿ ಎರಡನೇ ಬಾರಿ ಪದಗ್ರಹಣದಲ್ಲಿ ಪಾಲ್ಗೊಂಡಿದ್ದೇನೆ. ಈ ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. ಸಾಮಾನ್ಯ ಕಾರ್ಯಕರ್ತರಿಗೂ ಉನ್ನತ, ಉತ್ತಮ ಸ್ಥಾನಮಾನ ಕೇವಲ ಬಿಜೆಪಿಯಲ್ಲಿ ಸಿಗುತ್ತದೆ. ಕಾಂಗ್ರೆಸ್ ಬರೀ ಕುಟುಂಬಕ್ಕೆ ಬೆಳೆಸುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿಗಷ್ಟೇ ಭವಿಷ್ಯ ಇದೆ. ಕಾಂಗ್ರೆಸ್, ಇಂಡಿ ಒಕ್ಕೂಟದ ನಾಯಕರು ಹಗಲುಗನಸು ನೋಡುವುದು ಬಿಡಲಿ ಎಂದು ಹೇಳಿದ್ದಾರೆ.