ಸಮಸ್ಯೆಗಳ ಆಗರವಾಗಿರುವ ಬ್ಯಾಡಗಿ ರೈಲು ನಿಲ್ದಾಣ
ಬ್ಯಾಡಗಿ, ಜೂ10: ವಾರ್ಷಿಕ 3500 ಕೋಟಿ ರೂಗಳ ಮೆಣಸಿನಕಾಯಿ ವಹಿವಾಟು ನಡೆಸುವ ಬ್ಯಾಡಗಿ ರೈಲ್ವೇ ನಿಲ್ದಾಣವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಪ್ರಯಾಣಿಕರಿಗೆ ಕಿರಿಕಿರಿಯಾಗುವಂತಾಗಿದೆ. ಈ ಮೊದಲಿದ್ದ ಶತಮಾನದ ರೈಲ್ವೇ ನಿಲ್ದಾಣದ ಬದಲು ಬಹಳ ದೂರದಲ್ಲಿ ಅವೈಜ್ಞಾನಿಕವಾಗಿ ಹೊಸ ರೈಲ್ವೇ ನಿಲ್ದಾಣ ನಿರ್ಮಿಸಲಾಗಿದ್ದು ಅದು ಪ್ರವೇಶ ದ್ವಾರದಲ್ಲಿಯೇ ಸೋರುತ್ತಿರುವುದು ರೈಲ್ವೆ ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಕೈಗನ್ನಡಿಯಾಗಿದೆ.
ರೈಲ್ವೇ ನಿಲ್ದಾಣಕ್ಕೆ ಹೊಗುವ ಮಾರ್ಗಕ್ಕಾಗಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದು ಅದು ಕೂಡ ಕಳಪೆಯಾಗಿ ಸಣ್ಣಸಣ್ಣ ಗುಂಡಿಗಳಂತಾಗಿದ್ದು, ಅದರಲ್ಲಿ ನೀರು ನಿಂತು ಪ್ರಯಾಣಿಕರು ಓಡಾಡಲು ತೊಂದರೆಯಾಗುತ್ತಿದೆ. ಗುತ್ತಿಗೆದಾರರು ಕಾಮಗಾರಿಯನ್ನು ಅಸಮರ್ಪಕವಾಗಿ ಮುಗಿಸಿದ ನಂತರ ಉಳಿದ ಕೆಲವು ವಸ್ತುಗಳನ್ನು ಎಲ್ಲಿ ಬೇಕಾದಲ್ಲಿ ಎಸೆದಿದ್ದು ಮುಳ್ಳಿನ ಗಿಡಗಳು ಬೆಳೆಯಲು ಕಾರಣವಾಗಿದೆ. ದಾರಿಯಲ್ಲಿ ಸರಿಯಾಗಿ ಬೀದಿ ದೀಪಗಳೇ ಇಲ್ಲವಾಗಿದೆ. ಹಳೆಯ ಸ್ಟೇಷನ್ ನಿಂದ ಮೋಟೆಬೆನ್ನೂರ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲದ್ದರಿಂದ ರಾತ್ರಿ ಸಮಯದಲ್ಲಿ ವಿಷಜಂತುಗಳು ಕಡಿದರೆ ನಮ್ಮ ಗತಿಯೇನು ಎಂಬ ಜೀವ ಭಯದಲ್ಲಿ ಪ್ರಯಾಣಿಕರು ಓಡಾಡಬೇಕಿದೆ.
ಇನ್ನು ರೈಲ್ವೇ ನಿಲ್ದಾಣದ ಮುಂದೆಯೇ ಬೈಕುಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಅನಾವಶ್ಯಕವಾಗಿ ತೊಂದರೆ ಮಾಡುವುದು ನಿರಂತರವಾಗಿ ನಡೆದಿದೆ. ಬೈಕುಗಳನ್ನು ನಿಲ್ಲಿಸಿ ಜನರಿಗೆ ತೊಂದರೆ ಮಾಡಬೇಡಿ ಎಂದು ರೈಲ್ವೇ ಸಿಬ್ಬಂದಿಗಳು ಮನವಿ ಮಾಡಿದ್ರು ಇಲ್ಲವಾಗಿದೆ. ಅಲ್ಲದೇ ಈ ಬಗ್ಗೆ ಹಲವಾರು ಬಾರಿ ಸಿಬ್ಬಂದಿಗೆ ಬೈಕ್ ಸವಾರರು ಬೈದು ನಿಂದಿಸಿದ ಉದಾಹರಣೆಗಳು ಕಂಡು ಬರುತ್ತಿವೆ. ಇದಕ್ಕೆ ಮುಖ್ಯವಾಗಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡದಿರುವುದು ಒಂದು ಕಾರಣವಾಗಿದೆ. ರೈಲ್ವೆ ನಿಲ್ದಾಣದ ಮುಂದೆ ಗಾರ್ಡನ್ ಮಾಡುವುದು ಸೇರಿದಂತೆ ಹಲವಾರು ಕೊರತೆಗಳು ಇಲ್ಲಿದ್ದು, ತಾಲೂಕ ರೈಲ್ವೇ ಪ್ರಯಾಣಿಕರ ಕ್ಷೇಮಾಭಿವೃದ್ಧಿ ಹಾಗೂ ಸುಧಾರಣೆ ಸಮಿತಿಯವರು ಹಲವಾರು ಬಾರಿ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್ ಬಳಿ ಮನವಿ ಪತ್ರ ನೀಡಿದರೂ ಸಹ ಸಮಸ್ಯೆಗಳ ಪರಿಹಾರಕ್ಕೆ ಮಾನ್ಯತೆ ಸಿಗುತ್ತಿಲ್ಲ.
ಈ ಮದ್ಯೆ ಕಳೆದ 5 ವರ್ಷಗಳಿಂದ ನಿಲುಗಡೆ ಆಗುತ್ತಿರುವ ಧಾರವಾಡ ಬೆಂಗಳೂರು ಇಂಟರ್ಸಿಟಿ ವೇಗದ ರೈಲನ್ನು ಸ್ಥಗಿತ ಮಾಡುವ ವಿಚಾರ ಇಲಾಖೆಯಲ್ಲಿ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ ದಿನನಿತ್ಯ ಈ ರೈಲಿನ ಮೂಲಕ ಸಂಚರಿಸುವ ಪ್ರಯಾಣಿಕರು ಇದರಿಂದ ಕಂಗಾಲಾಗಿದ್ದಾರೆ. 13ವರ್ಷಗಳ ನಿರಂತರ ಹೋರಾಟದ ಫಲವಾಗಿ ಬ್ಯಾಡಗಿ ರೈಲ್ವೇ ನಿಲ್ದಾಣದಲ್ಲಿ ಇಂಟರ್ಸಿಟಿ ನಿಲ್ಲುತ್ತಿದೆ. ಇದರಿಂದ ಎಲ್ಲರಿಗೂ ಅನಕೂಲ ಇದೆ. ಕೇವಲ ಆದಾಯ ಕಡಿಮೆ ಎಂಬ ಕಾರಣಕ್ಕೆ ನಿಲುಗಡೆ ಸ್ಥಗಿತ ಮಾಡಬಾರದು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.