ಪೋಷಣೆಯುಕ್ತ ಸಧೃಢ ಭಾರತ ಕಟ್ಟಲು ಸರ್ಕಾರದ ಯೋಜನೆಗಳು ಸಹಕಾರಿಯಾಗಿವೆ: ಶಾಸಕ ಎ.ಆರ್.ಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.25-ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಗಳ ಸದ್ಬಳಕೆಯಿಂದ ಪೋಷಣೆಯುಕ್ತ ಸಧೃಢ ಭಾರತವನ್ನು ಕಟ್ಟಲು ಸಾಧ್ಯ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಅಭಿಪ್ರಾಯಪಟ್ಟರು.
ಕೊಳ್ಳೇಗಾಲದ ಮಾನಸ ಶಿಕ್ಷಣ ಸಂಸ್ಥೆ ಆವರಣದಲ್ಲಿಂದು ಮೈಸೂರಿನ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ, ಕೊಳ್ಳೇಗಾಲ ಶಿಶು ಅಭಿವೃಧ್ದಿ ಯೋಜನೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಚಾಮರಾಜನಗರ ಸಹಯೋಗದಲ್ಲಿ ‘ಪೋಷಣ ಮಾಸ-2024’ರ ಅಂಗವಾಗಿ ಆಯೋಜಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಚಾಮರಾಜನಗರದ ಹಲವೆಡೆ ಸಿಕಲ್ ಸೆಲ್ ಅನಿಮಿಯ ಕಾಯಿಲೆಯಿಂದ ಬುಡಕಟ್ಟು ಸಮುದಾಯದ ಕೆಲವರು ಆರೋಗ್ಯ ತೊಂದರೆಗೊಳಗಾಗಿದ್ದು, ಇದರ ನಿವಾರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಸರ್ಕಾರದ ಯೋಜನೆಗಳ ಮೂಲಕ ಆರೋಗ್ಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಗ್ರಾಮದಿಂದ ನಗರ ಪ್ರದೇಶದವರೆಗೂ ಆರೋಗ್ಯಯುತ ಸಮಾಜ ನಿರ್ಮಿಸಲು ಇದು ಸಹಕಾರಿಯಾಗಿದೆ ಎಂದು ಎ.ಆರ್. ಕೃಷ್ಣಮೂರ್ತಿ ಅವರು ತಿಳಿಸಿದರು.
ಕೇಂದ್ರ ಸಂವಹನ ಇಲಾಖೆಯ ಕ್ಷೇತ್ರ ಪ್ರಚಾರ ಅಧಿಕಾರಿ ಶೃತಿ ಎಸ್. ಟಿ. ಅವರು ಮಾತನಾಡಿ ಪೋಷಣ ಮಾಸ, ಪ್ರಧಾನ ಮಂತ್ರಿ ಜನ ಮನ, ಏಕ್ ಪೇಡ್ ಮಾ ಕೆ ನಾಮ್, ಸ್ವಚ್ಛತೆಯೇ ಸೇವೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಮಾಹಿತಿಯನ್ನು ಈ ಛಾಯಾಚಿತ್ರ ಪ್ರದರ್ಶನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಸರ್ವರೂ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಎಸ್. ದತ್ತೇಶ್‍ಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿ.ಎಫ್.ಟಿ.ಆರ್.ಐ. ನಿವೃತ್ತ ವಿಜ್ಞಾನಿ ಕೊಳ್ಳೇಗಾಲದ ಶರ್ಮ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ಪೋಷಣ ಮಾಸದ ಮಹತ್ವ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ವಿವರಿಸಿದರು.
ತಾಯಿಯ ಹೆಸರಲ್ಲಿ ಒಂದು ಸಸಿ ನೆಡುವ ಕಾರ್ಯಕ್ರಮದ ಅಂಗವಾಗಿ ವಿವಿಧ ಸಸಿಗಳನ್ನು ನೆಡಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ನಗರದಲ್ಲಿ ಜಾಥಾ ನಡೆಸಿ ಪೋಷಣ ಮಾಸದ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯವಂತ ಮಗು ಹಾಗೂ ಪೌಷ್ಟಿಕಾಂಶವುಳ್ಳ ಆಹಾರ ಸ್ಪರ್ಧೆಗಳನ್ನು ನಡೆಸಲಾಯಿತು. ಮಾನಸ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಂಗೋಲಿ ಹಾಗೂ ಸ್ವಚ್ಛ ಭಾರತ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಾತೃ ವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸಲಾಯಿತು. ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು. ಸಂಗೀತ ಮತ್ತು ನಾಟಕ ವಿಭಾಗದ ಕಲಾವಿದರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ವಲಯ ಅರಣ್ಯಾಧಿಕಾರಿ ಕೆ. ಪಿ. ಪ್ರಫುಲ್ಲಾ, ಕ್ಷೇತ್ರ ಪ್ರಚಾರ ಸಹಾಯಕ ದರ್ಶನ್, ಕನ್ನಡ ಉಪನ್ಯಾಸಕರಾದ ಪುನೀತ್‍ಕುಮಾರ್, ರೋಹಿ ವಿನೋಲಿಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮೊದಲು ಸ್ವಚ್ಛತೆಯೇ ಸೇವೆ ಆಂದೋಲನದ ಅಂಗವಾಗಿ ಸತ್ತೇಗಾಲ ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿಯೊಂದಿಗೆ ಭರಚುಕ್ಕಿ ಪ್ರವಾಸಿ ತಾಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.