ಎಲೆಕ್ಟ್ರಿಕ್ ಬೈಕ್ ಉದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು, ಯೂರೋಪಿಗೆ ರಪ್ತು
ಬೆಂಗಳೂರು.ಸೆ.೨೫-ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕನ್ನಡಿಗರೇ ಪ್ರಾರಂಭಿಸಿರುವ ಅಲ್ಟ್ರಾ ವಯಲೆಟ್ ಸಂಸ್ಥೆಯು ಎಲೆಕ್ಟ್ರಿಕ್ ವಾಹನ ಉದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾದಿಸಿದೆ ಎಂದರೆ ತಪ್ಪಾಗಲಾರದು ಹೌದು ಅಲ್ಟ್ರಾ ವಯಲೆಟ್ ಸಂಸ್ಥೆಯು ಏಷ್ಯಾದಲ್ಲಿಯೇ ಪ್ರಥಮ ಬಾರಿಗೆ ಎಪ್.೭೭ ಮಾಚ್ ೨೨ ಎಂಬ ಅಧಿಕ ಸಾಮರ್ಥ್ಯದ ಎಲೆಕ್ಟಿಕ್ ಬೈಕ್‌ಗಳನ್ನು ಯೂರೋಪಿಯನ್ ಒಕ್ಕೂಟದ ಮಾರುಕಟ್ಟೆಗೆ ರಪ್ತು ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದು ಇಂದು ರಫ್ತು ಉತ್ಪಾದನೆಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಅಲ್ಟ್ರಾ ವಯಲೆಟ್‌ನ ಎಲೆಕ್ಟ್ರಿಕ್ ಬೈಕ್‌ಗಳ ರಫ್ತು ಭಾರತದ ಆಟೋಮೊಟಿವ್ ಉದ್ಯಮದಲ್ಲಿ ಪ್ರಮುಖ ಘಟ್ಟ ಎನಿಸಲಿದೆ. ಜಾಗತಿಕವಾಗಿ ಭಾರತದ ಉತ್ಪನ್ನಗಳು ಪೈಪೋಟಿ ನೀಡುವ ಸಾಮರ್ಥ್ಯಕ್ಕೆ ಇದು ಪುಷ್ಠಿ ನೀಡಿದೆ. ಭಾರತವನ್ನು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ವಲಯವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೊಂದಿರುವ ದೂರದೃಷ್ಟಿಗೆ ಇದು ಪೂರಕವಾಗಿದೆ ಎಂದು ಹೇಳಿದರು.
ಸಚಿವ ಎಂ.ಬಿ.ಪಾಟೀಲ್ ಮಾತನಾಡಿ ಭಾರತದ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯಲ್ಲಿ ಬೆಂಗಳೂರು ಮುಂಚೂಣಿಯ ಸ್ಥಾನದಲ್ಲಿದೆ. ಜಾಗತಿಕ ಗುಣಮಟ್ಟದ ಬೈಕ್‌ಗಳನ್ನು ತಯಾರಿಸಿ ರಫ್ತು ಮಾಡುತ್ತಿರುವ ಅಲ್ಟ್ರಾವಯಲೆಟ್ ಕಂಪೆನಿಯನ್ನು ಭಾರತದ ಟೆಸ್ಲಾ ಎಂದೂ ಬಣ್ಣಿಸ ಬಹುದು. ಕಂಪೆನಿಯ ಯಶಸ್ಸು ನಮ್ಮಲ್ಲಿರುವ ನಾವೀನ್ಯತೆಗೆ ಪ್ರೋತ್ಸಾಹ ನೀಡುವ ವಾತಾವರಣಕ್ಕೆ ಸಾಕ್ಷಿಯಾಗಿದೆ. ಸುಸ್ಥಿರ ಅಭಿವೃದ್ಧಿ ಮತ್ತು ತಂತ್ರಜ್ಞಾನ ನಾಯಕತ್ವದ ಪ್ರಯಾಣದಲ್ಲಿ ಈ ರಫ್ತು ಹೊಸ ಅಧ್ಯಾಯ ಬರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್, ಅಲ್ಟ್ರಾ ವಯಲೆಟ್ ಸಂಸ್ಥೆಯ ನೀರಜ್ ರಾಜಮೋಹನ್, ನಾರಾಯಣ್ ಸುಬ್ರಮಣಿಯಮ್ ಉಪಸ್ಥಿತರಿದ್ದರು.