ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ
ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.25- ಶಿಕ್ಷಣ ವ್ಯಾಪಾರಿಕರಣವಾಗಿರುವ ಈಗಿನ ಕಾಲಘಟ್ಟದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು, ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಹೊಣೆಗಾರಿಕೆಯಾಗಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಪಟ್ಟಣದ ಶ್ರೀ ಶ್ರೀನಿವಾಸ ಕನ್ವೆನ್ಷನ್ ಹಾಲ್ ನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನು ಕಲಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕಲಿಕೆಯಲ್ಲಿ ಹಿಂದುಳಿಯುತ್ತಿರುವ ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ತಾಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಜನಪ್ರತಿನಿಧಿಯಾಗಿ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ನಾವು ಕೂಡ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದು ಸುನೀಲ್ ಬೋಸ್ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಶಿಕ್ಷಣವನ್ನು ಸರ್ವತ್ರಿಕರಣಗೊಳಿಸಿ, ಮೂಲಭೂತ ಹಕ್ಕನ್ನಾಗಿ ಮಾಡಿದ್ದರಿಂದ ಶಾಲೆಯಿಂದ ಹೊರಗೂಳಿದವರನ್ನು ಕಲಿಕೆಗೆ ಕರೆ ತರಲು ಶಿಕ್ಷಕರೇ ಮನೆ ಮನೆಗೆ ತೆರಳಿ ಮಕ್ಕಳನ್ನ ಶಾಲೆಗೆ ದಾಖಲಿಸುವ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸಿದ್ದಾರೆ. ಶಿಕ್ಷಕರ ಪರಿಶ್ರಮದಿಂದ ದೇಶದಲ್ಲಿ ಸಾಕ್ಷರತೆಯ ಪ್ರಮಾಣ ಏರಿಕೆಯಾಗಿದೆ. ಜೀವನದಲ್ಲಿ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಎಲ್ಲರೂ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲೇ ನಿವೃತ್ತ ಶಿಕ್ಷಕರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಸರ್ಕಾರ ಉಚಿತವಾಗಿ ನೀಡುವ ಲ್ಯಾಪ್ಟಾಪ್ಗಳನ್ನ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ವಿಧಾನಪರಿಷತ್ ಸದಸ್ಯ ವಿವೇಕಾನಂದ, ಪುರಸಭೆ ಅಧ್ಯಕ್ಷೆ ವಸಂತ ಶ್ರೀಕಂಠ, ಬನ್ನೂರು ಪುರಸಭೆ ಉಪಾಧ್ಯಕ್ಷ ನಾಗರತ್ನ ಪ್ರಭಾಕರ್, ಸದಸ್ಯರಾದ ಎನ್. ಸೋಮಣ್ಣ, ಆರ್.ನಾಗರಾಜು., ಸಿ.ಪ್ರಕಾಶ್, ಬಾದಾಮಿ ಮಂಜು, ಮಾಜಿ ಸದಸ್ಯ ರಾಘವೇಂದ್ರ, ರಜತ್ ಸ್ವಾಮಿ, ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಮುದ್ದೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಹೆಚ್.ಎನ್.ಉಮೇಶ್, ಮಾಜಿ ಸದಸ್ಯರಾದ ಕುಕ್ಕೂರು ಗಣೇಶ್, ರಾಮಲಿಂಗಯ್ಯ, ಎಂ.ರಮೇಶ್, ಲಕ್ಷ್ಮೀನಾರಾಯಣ, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ, ಎಇಇ ಪಿ.ಎನ್. ಚರಿತಾ, ಪುರಸಭಾ ಮುಖ್ಯಾಧಿಕಾರಿಗಳಾದ ವಸಂತಕುಮಾರಿ, ಹೇಮಂತ್ ರಾಜ್, ಸಹಾಯಕ ನಿರ್ದೇಶಕರುಗಳಾದ ಶಾಂತ, ರಾಜಣ್ಣ, ಲಿಂಗರಾಜು ಬಿಆರ್ ಸಿ ನಾಗೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ದಿನಾಚರಣೆ ಸಂಘದ ಅಧ್ಯಕ್ಷ ಸುಬ್ಬಣ್ಣ, ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಸೋಸಲೆ ನಾಗೇಶ್, ಕ್ಲಸ್ಟರ್ ನ ಸಿಆರ್ ಪಿಗಳು, ಬಿಆರ್ ಪಿಗಳು, ಶಿಕ್ಷಕರು ಇದ್ದರು.