ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.05: :ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಗೆ ತಂದವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಕೃಷಿ ಅಭಿವೃದ್ಧಿಗಾಗಿ ವಾಣಿವಿಲಾಸ ಸಾಗರ ಅಣೆಕಟ್ಟು ಹಾಗೂ ಕೃಷ್ಣ ರಾಜ ಸಾಗರ ಅಣೆಕಟ್ಟು ನಿರ್ಮಾಣ ಮಾಡಿಸಿದರು.
ಲೆಸ್ಲಿ ಮಿಲ್ಲರ್ ಆಯೋಗ ರಚಿಸಿ ವರದಿ ಆದರಿಸಿ ಬ್ರಾಹ್ಮಣ ಹಾಗೂ ಆಂಗ್ಲೋ ಇಂಡಿಯನ್ನರನ್ನು ಹೊರಗಿಟ್ಟು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅವಕಾಶ ಕಲ್ಪಿಸಿದರು.
ಬುಡಕಟ್ಟು, ಅಲೆಮಾರಿ ಹಾಗೂ ಗಿರಿಜನರ ಶಿಕ್ಷಣಕ್ಕಾಗಿ ಅನೇಕ ಶಾಲೆಗಳನ್ನು ತೆರೆದು ಎಲ್ಲಾ ವರ್ಗದ ಜನರಿಗೆ ಮುಕ್ತ ಅವಕಾಶ ಕಲ್ಪಿಸಿದರು.
ಕನ್ನಡ ಭಾಷಾ ಸಾಹಿತ್ಯ ಅಭಿವೃದ್ಧಿ ಹಾಗೂ ನೆಲ,ಜಲ,ಗಡಿ ರಕ್ಷಣೆಗಾಗಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು.
ರೈತರ ಕೃಷಿಗೆ ಹಣಕಾಸಿನ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಸಹಕಾರಿ ಸಂಘಗಳನ್ನು ಸ್ಥಾಪಿಸಿದರು.
ಆರೋಗ್ಯ ದೃಷ್ಟಿಯಿಂದ ಕಣ್ಣಿನ, ಕ್ಷಯರೋಗ  ಆಸ್ಪತ್ರೆಗಳನ್ನು ಆರಂಭಸಿದರು.
ಶಿಕ್ಷಣ, ಆರೋಗ್ಯ, ನೀರಾವರಿ, ಕೃಷಿ ಬ್ಯಾಂಕ್ ಹೀಗೆ ಮೈಸೂರು ರಾಜ್ಯ ಸರ್ವತೋಮುಖ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿ,ಸಮಾಜದ ಎಲ್ಲ ವರ್ಗಗಳನ್ನು ಮೇಲೆತ್ತುವ ಪ್ರಯತ್ನ ಮಾಡಿದವರು. ಆದ್ದರಿಂದ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಾಳಬೇಕೆಂದು ಹೇಳಿದರು.
ನಾಡಹಬ್ಬ ದಸರಾ ಪ್ರಯುಕ್ತ ಹೆಣ್ಣು ಮಕ್ಕಳಿಗೆ ಹಮ್ಮಿಕೊಂಡಿದ್ದ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ವಿಜೇತ ಅಶ್ವಿನಿ, ಗೀತಾ ಹಾಗೂ ಮೇಘಮಾಲಗೆ ಬಹುಮಾನ ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ ಹೊನ್ನೂರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಿಗೆ ಶುಭಕೋರಿದರು.
ಗ್ರಾಮ ಸದಸ್ಯರಾದ ಸಣ್ಣ ಗಂಗಮ್ಮ, ಗ್ರಂಥಾಲಯ ಮೇಲ್ವಿಚಾರಕ ಕೆ.ಸಿದ್ದಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀದೇವಿ, ನಿಂಗಮ್ಮ,ಎಸ್.ಡಿ. ಎಂ.ಸಿ.ಮಾಜಿ ಅಧ್ಯಕ್ಷೆ ನಾಗಮ್ಮ, ಊರಿನ ಸಿದ್ದಮ್ಮ,ಗಾದಿಲಿಂಗಮ್ಮ,ವಿದ್ಯಾರ್ಥಿಗಳಾದ ಹುಲಿಗೆಮ್ಮ,ಲಾವಣ್ಯ, ಚಂದು,ಕೀರ್ತನ,ಜ್ಯೋತಿ ಮುಂತಾದವರು ಉಪಸ್ಥಿತರಿದ್ದರು.