ಆಡಂಬರದ ಜೀವನಕ್ಕಿಂತ ಆದರ್ಶದ ಜೀವನ ಶ್ರೇಷ್ಠ: ಹಾರಕೂಡ ಶ್ರೀ
ಬೀದರ್:ಅ.5: ಆಡಂಬರದ ಜೀವನಕ್ಕಿಂತ ಆದರ್ಶದ ಜೀವನ ಶ್ರೇಷ್ಠಎಂಬುವುದು ಅರಿತಾಗ ಸಹಬಾಳ್ವೆಯ ಬಳ್ಳಿ ಜಿಗುರೊಡೆಯಲು ಸಾಧ್ಯ ಎಂದು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಜನವಾಡ ಗ್ರಾಮದಲ್ಲಿ ಆಯೋಜಿಸಿದ ಗುರುವಂದನೆ ಹಾಗೂ ಹಾರಕೂಡ ಶ್ರೀಗಳ 722ನೇ ತುಲಾಭಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪರಮಪೂಜ್ಯರು
ವಿಶ್ವಾತ್ಮವಾಗಿರುವ ಭಾರತ ದೇಶದಲ್ಲಿ ಕನ್ನಡ ನಾಡು ತನ್ನದೇ ಆದ ವಿಶಿಷ್ಟ ಭಕ್ತಿ ಪರಂಪರೆಯನ್ನು ಇಂದಿಗೂ ಕಾಯ್ದುಕೊಂಡು ಬಂದಿದೆ.
ನಾಡಿನ ಭವ್ಯ ಧರ್ಮ ಪರಂಪರೆಯ ಬೇರುಗಳು ಹಳ್ಳಿಗಳಲ್ಲಿಯೇ ಭದ್ರವಾಗಿ ನೆಲೆಯೂರುವೆ ಎಂದರೆ ತಪ್ಪಾಗದು, ಇಂತಹ ಸುಂದರ ಸಾಮರಸ್ಯದ ಗ್ರಾಮವೊಂದು ಬಸವಕಲ್ಯಾಣ ತಾಲೂಕಿನಲ್ಲಿ ಇದೆ ಎಂದಾದರೆ ಅದು ಜನವಾಡ ಗ್ರಾಮ.
ಭಕ್ತಿ ಎಂಬುವುದು ಪೂಜಾ ವಿಧಾನಗಳಿಗೆ ಹಾರು ತುರಾಯಿಗಳಿಗೆ ವೈಭವದ ದ್ರಶ್ಯಾವಳಿಗಳಿಗೆ ಮಾತ್ರ ಸೀಮಿತವಾದುದಲ್ಲ.
ಗುರುವಿನೆಡೆಗೆ, ಪರಶಿವನೆಡೆಗೆ, ನಿತ್ಯ ನಿರಂತರವಾಗಿ ಪ್ರವಾಹದೋಪಾದಿಯಲ್ಲಿ ಹರಿಸುವ ಶುದ್ಧವಾದ, ನಿರ್ಮಲವಾದ ಪ್ರೇಮ.
ಹಾಗೆ ಹರಿಯುವ ಪ್ರೇಮದಲ್ಲಿ ತ್ಯಾಗ ಮತ್ತು ಸೇವೆ ಹೆಣೆದುಕೊಂಡಿರಬೇಕು.
ಇಂತಹದೊಂದು ಅದ್ಭುತ ಭಕ್ತಿಗೆ ಇವತ್ತು ಜನವಾಡ ಗ್ರಾಮ ಸಾಕ್ಷಿಯಾಗಿ ನಿಂತಿದೆ, ಸಂಸ್ಕಾರದಿಂದ ಹಾಲು ತುಪ್ಪವಾಗಿ ಮಾರ್ಪಡುವಂತೆ ಹಾರಕೂಡ ಶ್ರೀಮಠದ ಸಂಸ್ಕಾರಕ್ಕೆ ಒಳಪಟ್ಟ ಜನವಾಡ ಗ್ರಾಮದ ಎಲ್ಲಾ ಜನತೆ ಚನ್ನಬಸವ ಶಿವಯೋಗಿಗಳು ಒಪ್ಪಿ ಅಪ್ಪಿಕೊಳ್ಳುವ ನಿಜಭಕ್ತರಾಗಿ ಮಾರ್ಪಟ್ಟಿರುವಿರಿ ಎಂದು ನಾವು ಸಂತೋಷದಿಂದ ಹೇಳಬಯಸುತ್ತೇವೆ ಎಂದರು,
ಮನೆಯಲ್ಲಿ ಸಂಸಾರಿಯಾಗಿದ್ದರೂ ಮನದಲ್ಲಿ ಸನ್ಯಾಸಿಯಾಗಿರಬೇಕು, ಅಂದರೆ ಬದುಕಿಗೆ ಬೇಡವಾದ ವಿಷಯಗಳ ಕುರಿತು ಯಾವಾಗಲೂ ಸನ್ಯಾಸಧೋರಣೆ ತಾಳಿರುವ ವ್ಯಕ್ತಿ, ಸತ್ಯಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ.
ಇವತ್ತಿನ ಧಾವಂತದ ಬದುಕಿನ ಜಂಜಾಟದಲ್ಲಿ ಸಿಲುಕಿದ ವ್ಯಕ್ತಿ ಭೌತಿಕ ಐಶ್ವರ್ಯದ ಬೆನ್ನು ಹತ್ತಿ ಹಪಾಹಪಿತನ ತೋರುತ್ತಿರುವುದು ಶುಚಿ ಬಾಳಿನ ಸಂಕೇತವಲ್ಲ.
ನೆಮ್ಮದಿ ಮತ್ತು ಸಮಾಧಾನದ ಬರಪೀಡಿತ ಬದುಕು ಸಾಗಿಸುತ್ತಿರುವುದು ಶೋಚನೀಯವಾಗಿದೆ.
ಹಾರಕೂಡ ಜನವಾಡ ಭೌಗೋಳಿಕವಾಗಿ ಅಂತರದಲ್ಲಿದ್ದರೂ ಆಧ್ಯಾತ್ಮಿಕವಾಗಿ ಭಕ್ತಿಯ ಸೇತುವೆ ಹೊಂದಿರುವ ಅಪರೂಪದ ಧರ್ಮ ಬಾಂಧವ್ಯದಿಂದ ಕೂಡಿದ್ದಾಗಿವೆ.
ಗ್ರಾಮದ ಎಲ್ಲಾ ಭಕ್ತರು ಸೇರಿ ನಮ್ಮನ್ನು ಶ್ರದ್ಧೆ, ನಿಷ್ಠೆಯಿಂದ ಬರಮಾಡಿಕೊಂಡು ಗುರುವಂದನೆ ಹಾಗೂ ತುಲಾಭಾರ ಸೇವೆ ಸಲ್ಲಿಸಿರುವುದು ನಾವಷ್ಟೇ ಅಲ್ಲದೆ, ಚನ್ನಬಸವ ಶಿವಯೋಗಿಗಳು ತೃಪ್ತರಾಗಿದ್ದಾರೆ ಎನ್ನುವ ಮಾತನ್ನು ಹೇಳಿ ಎಲ್ಲರ ಬಾಳು ಸುಖ, ಶಾಂತಿ, ನೆಮ್ಮದಿ, ಶ್ರೇಯಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ದೇವರಾಜ ಕೊಳ್ಳದ ಸ್ವಾಗತಿಸಿದರು.
ಕನಕದಾಸ ಕಣ್ಣೂರ ಭಿನ್ನವತ್ತಳೆ ವಾಚನ ಮಾಡಿದರು.ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನ ಗೀತೆ ನಡೆಸಿ ಕೊಟ್ಟರು.ರವಿ ಸ್ವಾಮಿ ಗೋಟೂರ, ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಮಾಹಾರುದ್ರ ಕಣ್ಣೂರ,ಅಣ್ಣಾರಾವ ಕೋಳ್ಳದ,ಧರ್ಮರಾವ ಪಾಟೀಲ, ಮೇಲಿಂದ ಕೊಳ್ಳದ,ಡಾ. ಶಿವಪುತ್ರ ಹೊಲ್ಕರ,
ವಿಠ್ಠಲ ಕೋಳ್ಳದ,ಗಣಪತಿ ವರ್ಮಾ, ಅಭಿಷೇಕ ಕೊಳ್ಳದ,ಹಣಮಂತ ಪಾಟೀಲ,ಸೂರ್ಯಕಾಂತ ಶೇರಿಕರ,ಶಾಂತಪ್ಪ ಸರಜೋಳಗಿ ಮುಂತಾದವರು ಉಪಸ್ಥಿತರಿದ್ದರು.
ಅಂಬರಾಯ ಉಗಾಜಿ ನಿರೂಪಿಸಿದರು.ಅಪ್ಪಣ್ಣ ಕಣ್ಣೂರ ಜನವಾಡ ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ಗ್ರಾಮಕ್ಕೆ ಆಗಮಿಸಿದ ಹಾರಕೂಡ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು.
ಅಕ್ಷಯ ಕೋಳ್ಳದ ಮುಂತಾದವರು ಉಪಸ್ಥಿತರಿದ್ದರು.