ಅಕ್ಟೋಬರ್ 26ಕ್ಕೆ ಅರ್ಹತಾ ಪರೀಕ್ಷೆ: ಡಾ. ಅಬ್ದುಲ್ ಖದೀರ್’ಶಾಹೀನ್’ನಿಂದ ಸಿಯುಇಟಿ ಉಚಿತ ತರಬೇತಿ
ಬೀದರ್: ಅ.5:ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗಲು ಇಲ್ಲಿಯ
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹವು ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ
ಸಾಮಾನ್ಯ ಪ್ರವೇಶ ಪರೀಕ್ಷೆಗಳ ಉಚಿತ ತರಬೇತಿ ನೀಡಲು ನಿರ್ಧರಿಸಿದೆ. ತರಬೇತಿಗಾಗಿ
ಅಕ್ಟೋಬರ್ 26 ರಂದು ದೇಶದ 15 ರಾಜ್ಯಗಳ 100 ಕೇಂದ್ರಗಳಲ್ಲಿ ಅರ್ಹತಾ ಪರೀಕ್ಷೆ
ನಡೆಯಲಿದೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್
ತಿಳಿಸಿದ್ದಾರೆ.
12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸಾದ / ವ್ಯಾಸಂಗ ಮಾಡುತ್ತಿರುವ
ವಿದ್ಯಾರ್ಥಿಗಳು ಸ್ನಾತಕ ಹಾಗೂ ಪದವಿ ಅಂತಿಮ ವರ್ಷದಲ್ಲಿ ಓದುತ್ತಿರುವ/ಉತ್ತೀರ್ಣರಾದ
ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗಳ ತರಬೇತಿಗೆ ಅರ್ಹರು ಎಂದು ಹೇಳಿದ್ದಾರೆ.
ಶಾಹೀನ್‍ನ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನವೆಂಬರನಿಂದ ಸ್ನಾತಕ ಹಾಗೂ
ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಆನ್‍ಲೈನ್ ತರಬೇತಿ ಆರಂಭವಾಗಲಿದೆ.
ಸ್ನಾತಕ ಸಾಮಾನ್ಯ ಪ್ರವೇಶ ಪರೀಕ್ಷೆಯ ಆನ್‍ಲೈನ್ ತರಬೇತಿ ಮಾರ್ಚ್-ಏಪ್ರಿಲ್,
ಸ್ನಾತಕೋತ್ತರ ತರಬೇತಿ ಜನವರಿ- ಫೆಬ್ರುವರಿಯಲ್ಲಿ ಶುರುವಾಗಲಿವೆ ಎಂದು
ತಿಳಿಸಿದ್ದಾರೆ.
ಆನ್‍ಲೈನ್ ತರಬೇತಿ ಊಟ, ವಸತಿ ಸಹಿತ 40 ದಿನಗಳದ್ದಾಗಿರಲಿದೆ. ಆಸಕ್ತರು ಅಕ್ಟೋಬರ್
22ರ ಒಳಗೆ www.shaheengroup.org/cuet ನಲ್ಲಿ ಹೆಸರು ನೋಂದಾಯಿಸಬಹುದು. ಹೆಚ್ಚಿನ
ಮಾಹಿತಿಗೆ ಮೊಬೈಲ್ ಸಂಖ್ಯೆ 8549897767 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ದೇಶದಲ್ಲಿ ಸುಮಾರು 200
ವಿಶ್ವವಿದ್ಯಾಲಯಗಳು ಇವೆ. ಸರ್ಕಾರದ ವಿಶ್ವವಿದ್ಯಾಲಯಗಳಲ್ಲಿ ಬಹು ಬೇಡಿಕೆಯ ವಿವಿಧ
ಕೋರ್ಸಗಳು, ಗುಣಮಟ್ಟದ ಶಿಕ್ಷಣ, ಉತ್ತಮ ಶೈಕ್ಷಣಿಕ ವಾತಾವರಣ ಹಾಗೂ ಅತ್ಯಂತ ಕಡಿಮೆ
ಶುಲ್ಕ ಇದೆ. ಹೀಗಾಗಿ ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ ಕುರಿತು
ಜಾಗೃತಿ ಮೂಡಿಸಲು ಹಾಗೂ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ
ವಿಶ್ವವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸಗಳಲ್ಲಿ ಪ್ರವೇಶಕ್ಕೆ
ನೆರವಾಗಲು ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶಾಹೀನ್‍ನಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಸಿಯುಇಟಿ ತರಬೇತಿ ಕೊಡಲಾಗಿದೆ. 6
ಅಭ್ಯರ್ಥಿಗಳು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ
ಯಶಸ್ಸು ಕಂಡಿದ್ದಾರೆ. ಉಚಿತ ತರಬೇತಿಯು ವಿದ್ಯಾರ್ಥಿಗಳಿಗೆ ಯುಪಿಎಸ್‍ಸಿ,
ಕೆಪಿಎಸ್‍ಸಿ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹಕಾರಿಯಾಗಲಿದೆ ಎಂದು
ಹೇಳಿದ್ದಾರೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉಚಿತ ತರಬೇತಿಯ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.