ಮೂರನೇ ಬಾರಿಗೆ ಮೋದಿ ಪ್ರಧಾನಿ; ವಿಜಯನಗರದಲ್ಲಿ ಸಂಭ್ರಮದ ಅಲೆ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಜೂ10: ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿ ಭಾನುವಾರ ಸಂಜೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಐತಿಹಾಸಿಕ ನಗರಿ ವಿಜಯನಗರ ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಲೋಕಸಭೆಯಲ್ಲಿ ಹ್ಯಾಟ್ರಿಕ್ ದಾಖಲೆ ಸೃಷ್ಟಿಸಿರುವ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಒಕ್ಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಯುವ ಕೋಶಾಧ್ಯಕ್ಷ ಸಿದ್ಧಾರ್ಥಸಿಂಗ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಬೆಳಗ್ಗೆ ದೇವಸ್ಥಾನಗಳÀಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಐದು ವರ್ಷಗಳ ಕಾಲ ಯಾವುದೇ ವಿಘ್ನಗಳಿಲ್ಲದೇ ಸರ್ಕಾರ ನಡೆಯಲಿದೆ. ದೇಶ ಸುಭಿಕ್ಷೆಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಸಂಜೆ 5 ಗಂಟೆಗೆ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ಇಲ್ಲಿನ ಭಟ್ರಳ್ಳಿ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಬಿಜೆಪಿ ಜಿಲ್ಲಾ ಕಚೇರಿಗೆ ತಲುಪಿತು. ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಕಾರ್ಯಕರ್ತರು, ಬಿಜೆಪಿಯ ಬೃಹತ್ ಧ್ವಜಗಳನ್ನು ಹಿಡಿದು, ಭಾರತ ಮಾತೆ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರ ಮೊಳಗಿಸಿದ ಜಯಘೋಷ ಮುಗಿಲು ಮುಟ್ಟಿತು.
ಬಿಜೆಪಿ ಕಚೇರಿಯಲ್ಲಿ ಹಬ್ಬದ ಸಂಭ್ರಮ:
ನವದೆಹಲಿಯಲ್ಲಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನೇರ ವೀಕ್ಷಣೆಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಕಚೇರಿಯಲ್ಲಿ ನೆರೆದಿದ್ದ ನೂರಾರು ಕಾರ್ಯಕರ್ತರು,  ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಹರ್ಷೋದ್ಘಾರ ಮೊಳಗಿಸಿದರು. ಪರಿಸ್ಪರ ಕೈಕುಲುಕಿ, ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಇನ್ನೂ ಕೆಲ ಕಾರ್ಯಕರ್ತರು ಮೋದಿ ಮೋದಿ ಎಂಬ ಜಯಘೋಷಣೆಯೊಂದಿಗೆ ಕುಣಿದು ಕುಪ್ಪಳಿಸಿದರು.
ಭಾಣ ನಿರಸುಗಳ ಚಿತ್ತಾರ:
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳಿಂದ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಇಲ್ಲಿನ ಬಿಜೆಪಿ ಕಚೇರಿ ಮಾತ್ರವಲ್ಲದೇ ನಗರದ ಎಲ್ಲೆಡೆ ಬಾಣ, ಬಿರುಸಿಗಳ ಸದ್ದು ಜೋರಾಯಿತು. ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇಲ್ಲಿನ ಡಾ.ಪುನೀತ್ ರಾಜ್ ಕುಮಾರ್ ಸರ್ಕಲ್, ಮೂರಂಗಡಿ ಸರ್ಕಲ್, ಮೇನ್ ಬಜಾರ್, ಎಂ.ಪಿ.ಪ್ರಕಾಶ ನಗರ, ಬಸವೇಶ್ವರ ಸರ್ಕಲ್, ಡ್ಯಾಂ ರೋಡ್, ಬಳ್ಳಾರಿ ರೋಡ್ ಸರ್ಕಲ್, ಹಂಪಿ ಸೇರಿದಂತೆ ಜಿಲ್ಲಾದ್ಯಂತ ಬಾಣ ಬಿರುಸುಗಳನ್ನು ಬಿಟ್ಟು, ಸಂಭ್ರಮಿಸಿದರು. ಈ ವೇಳೆ ರಾಕೆಟ್ ಬಾಣಗಳಿಂದಾಗಿ ಬಾನಂಗಳದಲ್ಲಿ ಬೆಳಕಿನ ಚಿತ್ತಾರ ಮೂಡಿಸುವ ಮೂಲಕ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಶುಭ ಕೋರಿದರು.