ಮೋದಿ ಸಂಪುಟಕ್ಕೆ ಎಚ್ ಡಿಕೆ ರಾಜ್ಯದ ಅಭಿವೃದ್ಧಿಗೆ ಪೂರಕ
ಬೀದರ್: ಜೂ.10:ನರೇಂದ್ರ ಮೋದಿ ನೇತೃತ್ವದ 3.0 ಎನ್ ಡಿಎ ಸರ್ಕಾರದ ಸಚಿವ ಸಂಪುಟದಲ್ಲಿ ಮಿತ್ರಪಕ್ಷ ಜೆಡಿಎಸ್ ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನ ಕಲ್ಪಿಸಿರುವುದು ಅತ್ಯಂತ ಹರ್ಷ ತಂದಿದೆ. ಕೇಂದ್ರ ಸಂಪುಟದಲ್ಲಿ ಕುಮಾರಸ್ವಾಮಿ ಅವರ ಸೇರ್ಪಡೆಯು ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಜೆಡಿಎಸ್ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.
ಮೋದಿ ಅವರು ಹಿಂದಿನ ಎರಡು ಅವಧಿ ದೇಶದ ವಿಕಾಸಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಈಗ ಮೂರನೇ ಅವಧಿಯು ಭಾರತವನ್ನು ಸರ್ವ ರೀತಿಯಿಂದಲೂ ಸಶಕ್ತ, ಸದೃಢಗೊಳಿಸಲಿದೆ. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಜನಪರ, ರೈತಪರ ಆಡಳಿತ ನೀಡಿರುವ ಕುಮಾರಸ್ವಾಮಿ ಅವರಂಥ ನಾಯಕರು ಈ ಸಲದ ಸಂಪುಟಕ್ಕೆ ಸೇರಿರುವುದು ಅಭಿವೃದ್ಧಿಗೆ ಮತ್ತಷ್ಟು ವೇಗ ಕೊಡಲಿದೆ ಎಂದು ನಾಗಮಾರಪಳ್ಳಿ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ವಿಜನ್ ಹೊಂದಿದ್ದಾರೆ. ಕೇಂದ್ರದ ಯೋಜನೆಗಳು ರಾಜ್ಯಕ್ಕೆ ಸಮರ್ಪಕವಾಗಿ ಸಿಗಲು, ನಾನಾ ಯೋಜನೆಗಳಿಗೆ ಮೂರ್ತ ರೂಪ ನೀಡುವುದಕ್ಕೆ ಕುಮಾರಸ್ವಾಮಿ ಅವರು ಪ್ರಯತ್ನ ಮಾಡಲಿದ್ದಾರೆ. ರಾಜ್ಯದ ಜನರ ವಿಶ್ವಾಸ, ಭರವಸೆಗೆ ತಕ್ಕಂತೆ ಕೆಲಸ ಮಾಡಿ ಮೋದಿ ಕ್ಯಾಬಿನೆಟ್ ನಲ್ಲಿ ಮಾದರಿ ಮಿನಿಸ್ಟರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದ್ದಾರೆ.
ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಭಾರತ ವಿಶ್ವದಲ್ಲೇ ಅತೀ ವೇಗದ ಆರ್ಥಿಕ ಬೆಳವಣಿಗೆ ಹೊಂದುತ್ತಿದೆ. ಮೂರನೇ ಆಡಳಿತದಲ್ಲಿ ದೇಶದ ಅರ್ಥ ವ್ಯವಸ್ಥೆ ವಿಶ್ವದಲ್ಲಿ 5 ರಿಂದ 3ನೇ ಸ್ಥಾನಕ್ಕೆ ಬರುವುದು ಖಚಿತ ಎನಿಸಿದೆ. ಎನ್ ಡಿಎ ಸರ್ಕಾರ ಮೋದಿ ಅವರ ನೇತೃತ್ವದಲ್ಲಿ ಸಂಪೂರ್ಣ ಐದು ವರ್ಷ ಅತ್ಯುತ್ತಮ, ಮಾದರಿ ಆಡಳಿತ ನೀಡಲಿದೆ. ಇಂಡಿ ಒಕ್ಕೂಟದವರು ಅಧಿಕಾರದ ಕನಸು ನೋಡುವುದು ಬೇಡ ಎಂದಿರುವ ಸೂರ್ಯಕಾಂತ ಅವರು, ಮೋದಿ ಅವರ 3.0.ಪದಗ್ರಹಣ ಸಮಾರಂಭಕ್ಕೆ ನನಗೆ ಆಹ್ವಾನ ಬಂದಿದ್ದು, ಇದರಲ್ಲಿ ಪಾಲ್ಗೊಂಡಿದ್ದಕ್ಕೆ ಅತೀವ ಖುಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಈ ಸಂಧರ್ಭದಲ್ಲಿ
ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಮಾಜಿ ಮಂತ್ರಿ ಬಂಡೆಪ್ಪ ಖಾಶೇಪುರೆ ಇದ್ದರು.