ಮಾಂಸಖಂಡ, ನರಗಳ ಪುನಶ್ಚೇತನಕ್ಕೆ ಪ್ರಾತ್ಯಕ್ಷಿಕೆ ಸಹಿತ ಯೋಗ.  ನಾಗಪ್ಪ ಕಂಬ್ಳಿಯವರಿಂದ ತರಬೇತಿ ಆರಂಭ.
ಸಂಜೆವಾಣಿ ವಾರ್ತೆ
ಹೊಸಪೇಟೆ, ಜೂ.10: ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಸ್ಟೇಷನ್ ರಸ್ತೆಯ ಫ್ರೀಡಂ ಪಾರ್ಕ್‍ನಲ್ಲಿ ಸೋಮವಾರ ಬೆಳಿಗ್ಗೆ 5.30ರಿಂದ 7 ಗಂಟೆಯವರೆಗೆ ಹಿರಿಯ ಯೋಗ ಶಿಕ್ಷಕ ಕಂಪ್ಲಿಯ ನಾಗಪ್ಪ ಕಂಬ್ಳಿ ಅವರಿಂದ ವಿಶೇಷ ಯೋಗ ಶಿಬಿರ ಆರಂಭವಾಗಿದೆ.
ಪತಂಜಲಿ ಯೋಗ ಸಮಿತಿ, ಫ್ರೀಡಂ ಪಾರ್ಕ್ ಯೋಗ ಕೇಂದ್ರದ ಸಹಯೋಗದಲ್ಲಿ ಸೋಮವಾರ ದಿಂದ ಶನಿವಾರದವರೆಗೂ ನಡೆದ ಈ ತರಬೇತಿಯಲ್ಲಿ ನಾಗಪ್ಪ ಅವರು ಧನುರಾಸನ ಮಾಡುವುದಕ್ಕೆ ಮೊದಲಾಗಿ ಕಾಲು, ಕೈಗಳ ನರ, ಮಾಂಸಖಂಡಗಳನ್ನು ಸಜ್ಜುಗೊಳಿಸಲು ಅಗತ್ಯವಾದ ಸುಮಾರು ಏಳು ಬಗೆಯ ಅಭ್ಯಾಸಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ಅಭ್ಯಾಸ ಮಾಡಿ ತೋರಿಸಿದರು.
72 ಸಾವಿರ ನರಗಳು:
‘ನಮ್ಮ ದೇಹದಲ್ಲಿ 72 ಸಾವಿರ ನರಗಳಿವೆ. ಈ ಪೈಕಿ 40 ಸಾವಿರ ನರಗಳು ಕಾಲುಗಳಲ್ಲಿ, 20 ಸಾವಿರ ನರಗಳು ಕೈಗಳಲ್ಲಿ ಹಾಗೂ 12 ಸಾವಿರ ನರಗಳು ಕಿವಿಗಳಲ್ಲಿ ಇವೆ. ಇಡೀ ದೇಹದ ನಿಯಂತ್ರಣದಲ್ಲಿ ನರಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಧನುರಾಸನದಂತಹ ಆಸನಗಳನ್ನು ಮಾಡುವಾಗ ಮೊದಲಿಗೆ ನಮ್ಮ ದೇಹದ ನರ, ಮಾಂಸಖಂಡಗಳನ್ನು ಸಜ್ಜಗೊಳಿಸುವುದು ಅಗತ್ಯ. ಕ್ರಮಬದ್ಧವಾಗಿ ಯೋಗಾಭ್ಯಾಸ ಮಾಡದರೆ ಅದರಿಂದ ಶೇ 100ರಷ್ಟು ಫಲ ನಿಶ್ಚಿತ’ ಎಂದು ನಾಗಪ್ಪ ಅವರು ವಿವರಣೆಯೊಂದಿಗೆ ಅಭ್ಯಾಸ ಮಾಡಿಸಿದರು.
ಅಮೆರಿಕ ಯುನಿವರ್ಸಿಟಿ ಆಫ್ ಯೋಗ ಅಂಡರ್ ಮೆಡಿಕಲ್ ಗೈಡೆನ್ಸ್‌ನಿಂದ ವಿಶೇಷ ತರಬೇತಿ ಪಡೆದಿರುವ ನಾಗಪ್ಪ ಅವರು ಶನಿವಾರದ ತನಕ ಈ ವಿಶೇಷ ಶಿಬಿರ ನಡೆಸಿಕೊಡಲಿದ್ದಾರೆ. ಹಿರಿಯ ಯೋಗ ಸಾಧಕರಾದ ಪ್ರಕಾಶ್‌ ಕುಲಕರ್ಣಿ, ರಾಜೇಶ್‌ ಕಾರ್ವಾ ಕೇಂದ್ರದ ಸಂಚಾಲಕ ಶ್ರೀರಾಮ, ವೆಂಕಟೇಶ, ರಾಮಚಂದ್ರ, ಅನಂತ ಜೋಶಿ  ಇತರೆ ಅನೇಕ ಯೋಗ ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು.