ದಿ.ಎಂ.ಜಿ. ಈಶ್ವರಪ್ಪರನ್ನು ಕಳೆದುಕೊಂಡು ದಾವಣಗೆರೆ ಸಾಂಸ್ಕೃತಿಕವಾಗಿ ಬಡವಾಯಿತು
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.10; ಸಾಂಸ್ಕೃತಿಕ ಸಿರಿತನಕ್ಕೆ ಜನಪದ ತಜ್ಞ ಹಾಗೂ ರಂಗಕರ್ಮಿ‌ ದಿ.ಡಾ.ಎಂ.ಜಿ ಈಶ್ವರಪ್ಪ ಒಂದು ಕೊಂಡಿಯಾಗಿದ್ದರು‌ ಎಂದು ನಟ,ಸಾಂಸ್ಕೃತಿಕ ಸಂಘಟಕ ಶ್ರೀನಿವಾಸ್ ಜಿ ಕಪ್ಪಣ್ಣ ಬಣ್ಣಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಪ್ರತಿಮಾ ಸಭಾದಿಂದ ಆಯೋಜಿಸಿದ್ದ ದಾವಣಗೆರೆಯ ಸಾಂಸ್ಕೃತಿಕ ಚೇತನ ಡಾ.ಎಂ.ಜಿ ಈಶ್ವರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾಂಸ್ಕೃತಿಕ ವಲಯದಲ್ಲಿ ದಾವಣಗೆರೆ ಅದ್ಬುತ ಕೆಲಸ ಮಾಡಿದೆ ಅದರಲ್ಲೂ ಪ್ರತಿಮಾ ಸಭಾ ಪ್ರಾರಂಭವಾದಾಗಿನಿಂದ ದಾವಣಗೆರೆಯಲ್ಲಿ ಸಾಂಸ್ಕೃತಿಕ ಯುಗದ ಆರಂಭಕ್ಕೆ ನಾಂದಿಯಾಗಿತ್ತು .ಕನ್ನಡ ನಾಡಿನ‌ ಪ್ರಖ್ಯಾತ ಚಿಂತಕರು ಹುಟ್ಟಿಕೊಂಡರು.ಅನೇಕ‌ ನಾಟಕಗಳು ನಡೆಯಿತು.ರಂಗಾಯಣದ ಮೊದಲ ಸಂದರ್ಶನ ದಾವಣಗೆರೆಯಲ್ಲಿ ನಡೆದಿತ್ತು.ಇದೊಂದು ಮಾದರಿಯಾಗಿ ಉಳಿದುಕೊಂಡಿದೆ.ಆ ಸಂದರ್ಶನದ ಡಾಕ್ಯುಮೆಂಟ್ ಇಂದಿಗೂ ಉಳಿದಿದೆ ಎಂದರು.ದಾವಣಗೆರೆಗೂ ಬಿವಿ ಕಾರಂತರಿಗೂ ಒಡನಾಟವಿತ್ತು.ಅಷ್ಟೇ ಏಕೆ ರಂಗಭೂಮಿ ನಿರ್ದೇಶಕ ಸುರೇಂದ್ರ ದಾವಣಗೆರೆ ಯವರು.ಅವರನ್ನು ಬೆಳೆಸಿದವರು ನಮ್ಮ ಎಂ.ಜಿ ಈಶ್ವರಪ್ಪನವರು.ಇಂದು ಸುರೇಂದ್ರ ಹೊರದೇಶದಲ್ಲೂ ನಾಟಕಗಳನ್ನು ಮಾಡುತ್ತಿದ್ದಾರೆ.ದಾವಣಗೆರೆಗೆ ಬಾರದ ನಿರ್ದೇಶಕರೇ ಇಲ್ಲ ಕಲಾವಿದರಿಲ್ಲ ಇಲ್ಲಿ ನಡೆಯದ ನಾಟಕಗಳಿಲ್ಲ ಇದು ದಾವಣಗೆರೆಯ ಹೆಗ್ಗಳಿಕೆ.ಬಿ.ವಿ ಕಾರಂತರು ಐದು ದಿನ ರಂಗ ಪಂಚಮಿ ಮಾಡಿದರು. ಪ್ರತಿಮಾ ಚಿತ್ರಕೂಟ ದಾವಣಗೆರೆಯಲ್ಲಿ ನಡೆಯಿತು.ಬಿ.ಜಯಶ್ರೀ ಸಿಆರ್ ಸಿಂಹ ರಂತಹ ನಿರ್ದೇಶಕರ ನಾಟಕಗಳು ದಾವಣಗೆರೆಯಲ್ಲಿ ಪ್ರದರ್ಶನ ಗೊಂಡವು ಇದಕ್ಕೆ ಕಾರಣ ದಾವಣಗೆರೆಯ ಪ್ರಬುದ್ದ ಪ್ರೇಕ್ಷಕರ ಸಹಕಾರ..ಈ ಎಲ್ಲಾ ಕಾರ್ಯಕ್ರಮ ವನ್ನು ಆಯೋಜಿಸುವಲ್ಲಿ ಮಹಾ ಸಭಾದ ಅಧ್ಯಕ್ಷ ಹಾಲಪ್ಪ ಇದ್ದರೆ ಇಲ್ಲಿ ನಡೆಯುವ ಚಟುವಟಿಕೆ ಗಳನ್ನು ಎಲ್ಲೆಡೆಗೆ ತಲುಪಿಸಿದ್ದು ಎಂ.ಜಿ ಈಶ್ವರಪ್ಪ ಎಂದು ಸ್ಮರಿಸಿದರು.ಯಾವಾಗಲೂ ದಾವಣಗೆರೆಯ ಆತಿಥ್ಯ ಅದ್ಬುತವಾಗಿತ್ತು ಅದಕ್ಕೆ ಗಾಯಕ ದಿ.ಅಶ್ವಥ್ ಗೆ ದಾವಣಗೆರೆ ಪ್ರಿಯವಾಗಿತ್ತು ಎಂದರು.ಖ್ಯಾತ ಲೇಖಕ ಕುಂ. ವೀರಭದ್ರಪ್ಪ ಮಾತನಾಡಿಜಾನಪದ ತಜ್ಞ ಎಂ.ಜಿ. ಈಶ್ವರಪ್ಪ ಅವರನ್ನು ಕಳೆದುಕೊಂಡು ದಾವಣಗೆರೆ ಸಾಂಸ್ಕೃತಿಕವಾಗಿ ಬಡವಾಗಿದ್ದು, ಈಶ್ವರಪ್ಪರ ಹೆಸರಲ್ಲಿ ಪ್ರಶಸ್ತಿ ಮತ್ತು ಯಾವುದಾದರೂ ರಸ್ತೆಗೆ ಅವರ ಹೆಸರನ್ನು ಇಡುವ ಮೂಲಕ ಅವರ ಹೆಸರನ್ನು ಜೀವಂತವಾಗಿ ಉಳಿಸಬೇಕಿದೆ ಈಶ್ವರಪ್ಪ ಕೇವಲ ವಿದ್ಯಾವಂತರಷ್ಟೇ ಆಗಿರಲಿಲ್ಲ, ಹೃದಯವಂತರು ಮತ್ತು ಸುಸಂಸ್ಕೃತರು ಆಗಿರುವ ಜತೆಗೆ ಸಾಂಸ್ಕೃತಿಕವಾಗಿಯೂ ಅವರಲ್ಲಿ ಪಾಂಡಿತ್ಯವಿತ್ತು. ಸಾಕಷ್ಟು ಶಿಷ್ಯರು ಅವರಿಂದ ಕಲಿತು ಇಂದು ಅನೇಕ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ ಎಂದರು.ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಬೇಕೆಂಬುದು ಈಶ್ವರಪ್ಪ ಅವರ ಆಶಯವಾಗಿತ್ತು. ಅವರ ಆಶಯದಂತೆ ಸರ್ಕಾರಕ್ಕೆ ಮನವಿ ಮಾಡಿ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಮುಂದಾಗೋಣ ಎಂದು ಕರೆ ನೀಡಿದರು.ಎಂ.ಜಿ. ಈಶ್ವರಪ್ಪ ಅವರ ನುಡಿನಮನಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಗಣ್ಯರು ಆಗಮಿಸಿದ್ದಾರೆಂದರೆ ಈಶ್ವರಪ್ಪ ಬಗ್ಗೆ ಎಲ್ಲರಿಗೂ ಇರುವ ಗೌರವ ತಿಳಿಯುತ್ತದೆ. ಅವರೆಂಥ ವರ್ಚಸ್ಸು ಹೊಂದಿದ್ದರೆಂದು ಅರ್ಥವಾಗುತ್ತದೆ. ನುಡಿನಮನ ಕಾರ್ಯಕ್ರಮದ ಮೂಲಕ ಮರುಸೃಷ್ಠಿ ಮಾಡುವ ಸಾಧ್ಯತೆ ಇರಬೇಕಿತ್ತು ಎಂದರು.ನಗರವಾಣಿ ಪತ್ರಿಕೆ ಸಂಪಾದಕರಾದ ಬಿ.ಎನ್ ಮಲ್ಲೇಶ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ದಿ.ಡಾ.ಎಂ.ಜಿ.ಈಶ್ವರಪ್ಪ ಹೇಗೋ ದಾವಣಗೆರೆ ಹಾಗಿದೆ.ಅವರ ಸ್ವಭಾವ ಗುಣಧರ್ಮ ಇಲ್ಲಿ ಬಿತ್ತಿ ಬೆಳೆಸಿದರು.ಅವರ ಸಾವು ಎಂದಾಗ ಎಲ್ಲರಲ್ಲೂ ಆಶ್ಛರ್ಯವಾಗಿತ್ತು.ಶರಣರ ಗುಣ ಮರಣದಲ್ಲಿ ನೋಡು ಎಂಬಂತೆ ಈಶ್ವರಪ್ಪ ಅವರಿದ್ದರು. ಅವರದು ಸಾಯುವ ವಯಸ್ಸಲ್ಲ.ಇನ್ನೂ ಹತ್ತು ಹದಿನೈದು ವರ್ಷ ಬಳಿ ಬದುಕಬೇಕಿದ್ದವರು.ಅವರು ನಾಡಿಗೆ ಸಾಂಸ್ಕೃತಿಕ ಕೊಡುಗೆ ನೀಡುವುದು ಬಹಳ ಇತ್ತು ದಿ. ಈಶ್ವರಪ್ಪ ಕೇವಲ ಕುಟುಂಬದ ಆಸ್ತಿಯಲ್ಲ ನಾಡಿನ‌ ಆಸ್ತಿ.ಜನಪದ ಬೇರು ಬಿಟ್ಟು ಹೋದವರು. ಧೀಮಂತ ವ್ಯಕ್ತಿ, ಮಿತ ಭಾಷಿ  ಎಂದಿಗೂ ಜಗಳವಾಡದ ವ್ಯಕ್ತಿ.ತರಗತಿ ಗಳಲ್ಲೂ ವಿದ್ಯಾರ್ಥಿಗಳನ್ನು ದಂಡಿಸಿದವರಲ್ಲಎಲ್ಲರನ್ನೂ ಒಳಗೊಳ್ಳುವ ವ್ಯಕ್ತಿತ್ವ ಹೊಂದಿದವರು ಎಂದು ಸ್ಮರಿಸಿದರು.ಅವರಲಿಲ್ಲದೇಸಾಂಸ್ಕೃತಿಕ ಶೂನ್ಯತೆ ಆವರಿಸಿದೆ ಅವರ ಪ್ರಭಾವಲಯ ಎಲ್ಲರನ್ನೂ ಸೆಳೆಯುವಂತಿತ್ತುಅವರ ಸಾವು ತುಂಬಾ ಅನ್ಯಾಯ.ಮುಂದಿನ ದಿನಗಳಲ್ಲಿ ದಿ.ಡಾ.ಎಂ.ಜಿ ಈಶ್ವರಪ್ಪ ಅವರ ಹೆಸರಿನಲ್ಲಿ ಪ್ರಶಸ್ತಿ ಹಾಗೂ ನಾಟಕೋತ್ಸವ ಹಮ್ಮಿಕೊಳ್ಳುವ ಚಿಂತನೆ ಹೊಂದಿದ್ದೇವೆ ಎಂದು ಹೇಳಿದರು.ಆರಂಭದಲ್ಲಿ ಗಾನ ಲಹರಿ ಸಂಗೀತ ವಿದ್ಯಾಲಯ ತಂಡದಿಂದ ರಂಗಗೀತೆಗಳನ್ನು ಹಾಡಲಾಯಿತು. ಪ್ರತಿಭಾ ಸಭಾ ಪ್ರಧಾನ ಕಾರ್ಯದರ್ಶಿ ಬಾ.ಮ. ಬಸವರಾಜಯ್ಯ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿಕೊಟ್ಟರು. ನಾಗರಾಜ್ ಸಿರಿಗೆರೆ ನಿರೂಪಿಸಿದರು.ವೇದಿಕೆಯಲ್ಲಿ ಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪ,ಪ್ರತಿಮಾ ಸಭಾ ಸಂಸ್ಥಾಪಕ ನಿರ್ದೇಶಕ ಪ್ರೋ.ಜಿ.ಎನ್ ಸತ್ಯಮೂರ್ತಿ,ಅಧ್ಯಕ್ಷ ಪ್ರೋ.ಎಸ್ ಹಾಲಪ್ಪ ಉಪಸ್ಥಿತರಿದ್ದರು.