ಮಾನವನ ಉಳಿವಿಗೆ ಪರಿಸರ ರಕ್ಷಣೆ ಅವಶ್ಯ: ಡಾ.ಮಹೇಶ್ವರ ಸ್ವಾಮೀಜಿ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ:ಜೂ.10 ಪ್ರಸ್ತುತ ದಿನಮಾನಗಳಲ್ಲಿ ಮಾನವನ ಉಳಿವಿಗೆ ಪರಿಸರ ಸಂರಕ್ಷಿಸುವುದು ಅವಶ್ಯವಾಗಿದೆ ಎಂದು ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ನಂದಿಪುರ ಪುಣ್ಯಕ್ಷೇತ್ರದ ಶ್ರೀ ಚರಂತಾರ್ಯ ಆಶ್ರಮದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಹಲವಾರು ಸಸಿಗಳನ್ನು ನೆಡುವುದರ ಮೂಲಕ ಅವರು ಮಾತನಾಡಿದರು. ಸೂರ್ಯನ ಬೆಳಕು, ನೀರು, ಗಾಳಿ ಮತ್ತು ಮಣ್ಣಿನ ಅಂಶಗಳನ್ನು ಒಳಗೊಂಡಿರುವ ಪರಿಸರ ಇವೆಲ್ಲವೂ ಮಾನವ ಉಳಿವಿಗೆ ಅವಶ್ಯಕವಾಗಿದೆ. ನಮ್ಮ ಪರಿಸರ ವ್ಯವಸ್ಥೆಯನ್ನು ರಕ್ಷಿಸದಿದ್ದರೆ ಪ್ರಾಣಿಗಳು, ಬೆಳೆಗಳು ಮತ್ತು ಅಂತಿಮವಾಗಿ ಮಾನವರೇ ಅಪಾಯವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಪರಿಸರ ರಕ್ಷಿಸುವುದರಿಂದ ಸುರಕ್ಷಿತ ವಾತಾವರಣ ಉಂಟಾಗಿ ಮಾರಣಾಂತಿಕ ರೋಗಗಳಿಂದ ಪಾರಾಗಿ, ಆರೋಗ್ಯ ಜೀವನ ನಡೆಸಬಹುದು ಎಂದರು.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ರೈತರು ಕೃಷಿ, ತೋಟಗಾರಿಕೆಯನ್ನು ಜನಸ್ನೇಹಿಯಾಗಿಸಿಕೊಂಡು ಸಾವಯವ ಉತ್ಪನ್ನಗಳ ಬಳಕೆಗೆ ಹೆಚ್ಚಿನ ಪ್ರೇರಣೆ ನೀಡಬೇಕಿದೆ ಎಂದರು. ಹೊಲದ ಬದುವುಗಳಲ್ಲಿ ಹೊಂಗೆ, ಬೇವು, ನೀಲಗಿರಿಯಂತಹ ಉಪಯೋಗಿ ಗಿಡ-ಮರಗಳನ್ನು ಬೆಳೆಸಿ ಹಸಿರು ಕ್ರಾಂತಿಯನ್ನ ಮಾಡಬೇಕಿದೆ ಎಂದು ಹೇಳಿದರು.
ಗದ್ದಿಕೆರೆ ಹಿರೇಮಠದ ಅಭಿನವ ಚರಂತೇಶ್ವರ ಸ್ವಾಮೀಜಿ, ಬೆಣ್ಣಿಹಳ್ಳಿ ಹಿರೇಮಠದ ಪಂಚಾಕ್ಷರಿ ಸ್ವಾಮೀಜಿ, ಹರಿಹರ ಬಿರ್ಲಾ ಕಂಪನಿಯ ಡೆಪ್ಯೂಟಿ ಮೇನೇಜರ್ ಎಸ್.ರಾಕೇಶ್, ಸಿಬ್ಬಂದಿಗಳಾದ ಬಿ.ವೀರೇಶ್, ಚಿ.ದೇವರಾಜ, ಕೆ.ಗೋಣೆಪ್ಪ, ಸಿ.ಮುನಿಯಪ್ಪ, ಗದ್ದಿಕೆರೆ ಮಂಜುನಾಥ, ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಇತರರು ಇದ್ದರು.