ಪಾರಂಪರಿಕ ಆಯುರ್ವೇದ ಔಷಧಿಯಿಂದ ಉತ್ತಮ ಆರೋಗ್ಯ: ಡಾ.ಮಹೇಶ್ವರ ಸ್ವಾಮೀಜಿ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಜೂ.೧೦; ಸಾಂಪ್ರದಾಯಿಕ ನಾಟಿ ವೈದ್ಯಕೀಯ ಪದ್ಧತಿಯನ್ನು ಅನುಸರಿಸಿ, ಆಯುರ್ವೇದ ಔಷಧಿ ಬಳಕೆಯಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ನಂದಿಪುರ ಪುಣ್ಯಕ್ಷೇತ್ರದ ಶ್ರೀಗುರು ದೊಡ್ಡ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮೃಗಶಿರ ನಕ್ಷತ್ರದಂದು ಅಸ್ತಮಾ, ಅಲರ್ಜಿ ಮತ್ತಿತರ ಅನಾರೋಗ್ಯ ಸಮಸ್ಯೆಯ ನೂರಾರು ಜನರಿಗೆ ಶುಕ್ರವಾರ ತಡರಾತ್ರಿ 1ಗಂಟೆ 4ನಿಮಿಷಕ್ಕೆ ವಿತರಣೆ ಮಾಡಿದ ಉಚಿತ ಅಸ್ತಮಾ ಚಿಕಿತ್ಸಾ ಶಿಬಿರದ  ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೃಗಶಿರಾ ನಕ್ಷತ್ರ ಪ್ರವೇಶ ಕಾಲದಲ್ಲಿ ಸೂರ್ಯನ ದಿಕ್ಕು ಬದಲಾಯಿಸುವದರಿಂದ ವಾತಾವರಣ ತಂಪಾಗಿ ಅಸ್ತಮಾ ರೋಗಿಗಳು ತೊಂದರೆಗೀಡಾಗುತ್ತಾರೆ.. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಮೃಗಶಿರಾ ನಕ್ಷತ್ರ ಪ್ರವೇಶ ಕಾಲದಲ್ಲಿ ಅಸ್ತಮಾ ರೋಗಿಗಳಿಗೆ ಉಚಿತ ಔಷಧ ನೀಡುವುದರಿಂದ ರೋಗ ನಿರೋಧಕ ಶಕ್ತಿ ಬೆಳೆದು ಅನೇಕ ರೋಗಗಳು ಬರದಂತೆ ದೇಹವನ್ನು ರಕ್ಷಿಸಿ ಆರೋಗ್ಯವನ್ನು ನೀಡುತ್ತದೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಕಲುಷಿತ ಆಹಾರ ಪದ್ಧತಿಯಿಂದ ಅನೇಕ ರೋಗ-ರುಜಿನಗಳು ಹೆಚ್ಚಾಗುತ್ತಿದ್ದು,ಆಸ್ಪತ್ರೆಗೆ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಆರೋಗ್ಯ ಹಿತ ದೃಷ್ಟಿಯಿಂದ ಅನುಕೂಲಕ್ಕೆ ತಕ್ಕಂತೆ ಪಾರಂಪರಿಕ ಆಯುರ್ವೇದ ಔಷಧ ಬಳಸಬೇಕಿದೆ. ಇಂದು ನೀಡುತ್ತಿರುವ ಈ ಔಷಧಿ ರೋಗಗಳನ್ನು ವಾಸಿಮಾಡುವ ರಾಮಬಾಣವಾಗಿದೆ ಎಂದರು.