ಸ್ವಚ್ಛ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು : ಆರ್ ಎಮ್ ಡಾಂಗೆ
ಅಥಣಿ :ಜೂ.10: ಸ್ವಚ್ಛ ಹಾಗೂ ಸುಂದರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಪ್ರಸ್ತುತ ಕಾರ್ಖಾನೆ, ವಾಹನಗಳ ದಟ್ಟಣೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರ ಹಾನಿ ಉಂಟಾಗುತ್ತಿದೆ. ಹೀಗಾಗಿ ನಗರದಲ್ಲಿ ಹೆಚ್ಚು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ನಿರ್ಮಿಸುವ ಕೆಲಸ ಮಾಡಬೇಕು ಎಂದು ರಾಯಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್ ಎಮ್ ಡಾಂಗೆ ಮನವಿ ಮಾಡಿದರು.
ಅವರು ಪಟ್ಟಣದ ಅಂಬೇಡ್ಕರ್ ವೃತ್ತ. ಶಿವಯೋಗಿ ವೃತ್ತ ಹಾಗೂ ಬಸವೇಶ್ವರ ವೃತ್ತದಲ್ಲಿ ರಾಯಲ್ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಸಿರೇ ಉಸಿರು ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಿಡ-ಮರಗಳ ಮಾರಣ ಹೋಮ ಹೆಚ್ಚುತ್ತಿರುವುದರಿಂದ ಅರಣ್ಯ ಸಂಪತ್ತು ಇನ್ನಿಲ್ಲವಾಗುತ್ತಿದೆ. ಇದರಿಂದಾಗಿ ಸತತ ಬರಗಾಲ ಎದುರಿಸುವ ದುಃಸ್ಥಿತಿ ಬಂದೋದಗಿದೆ. ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯ ಆವರಣದಲ್ಲಿ. ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಲಾಲನೆ-ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿದರೆ, ಖಂಡಿತಾ ಬರಗಾಲ ಅಳಿಸಬಹುದಾಗಿದೆ ಎಂದರು.
ಈ ವೇಳೆ ರಾಯಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್ ಎಮ್ ಡಾಂಗೆ ಅವರು ಸಾರ್ವಜನಿಕವಾಗಿ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ರೆಹಾನ್ ಡಾಂಗೆ. ಗೌರವ ಸಲಹೆಗಾರ ಮೊಹಮ್ಮದ ಜಹಾಂಗೀರ್, ಆಡಳಿತಾಧಿಕಾರಿ ಎ.ಎಚ್.ಮುಲ್ಲಾ, ಹೈಸ್ಕೂಲ್ ವಿಭಾಗದ ಮುಖ್ಯ ಗುರುಗಳಾದ ಸುರೇಶ ಬುರ್ಲಿ , ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಆಸಿಯಾ ಪಟೇಲ್. ಅಕ್ಷತಾ ಜಿರಗ್ಯಾಳ. ಅಮೃತಾ ಕುಲಕರ್ಣಿ. ತಜಮೀಮ್ ನಸರಲಿ. ಪರಶುರಾಮ ನಾಟೇಕರ್ ಸೇರಿದಂತೆ ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು