ಗುರು, ತಾಯಿ ತಂದೆ ಋಣ ತಿರಿಸಲಾಗದು : ಸ್ವರೂಪಾನಂದ ಶ್ರೀಗಳು
ಇಂಡಿ:ಜೂ.10:ವಿದ್ಯೆ ಕಲಿಸಿದ ಗುರುಗಳ, ತಂದೆ ತಾಯಿಗಳ ತ್ಯಾಗದ ಋಣ ಎಂದೂ ತೀರಿಸಲಾಗದು. ಗುರುಗಳು ಕೊಟ್ಟ ವಿದ್ಯಾದಾನ ಕೊನೆಯ ವರೆಗೂ ಇರುತ್ತದೆ. ಅದರ ಬೆಲೆ ಕಟ್ಟಲಾಗದು ಎಂದು ಸಿದ್ದಾರೂಢ ಮಠದ ಪರಮಪೂಜ್ಯ ಶ್ರೀ ಸ್ವರೂಪಾನಂದ ಶ್ರೀಗಳು ಹೇಳಿದರು.
ಪಟ್ಟಣದ ರಾಘವೇಂದ್ರ ಸ್ವಾಮೀಜಿಯವರ ದೇವಸ್ಥಾನದಲ್ಲಿ ಇಂಡಿಯ ಶ್ರೀ ಶಾಂತೇಶ್ವರ ಮಾಧ್ಯಮಿಕ ಶಾಲೆಯಲ್ಲಿ 1989-90 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಕಲಿತ ವಿದ್ಯಾರ್ಥಿ ಬಳಗದ ವತಿಯಿಂದ ಶ್ರೀ ಸುರೇಶ ಕೋಳೆಕರ ಗುರುಗಳ ಸ್ಮರಣಾರ್ಥ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತಾಲೂಕಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ,ಸಾಧಕರಿಗೆ ಸನ್ಮಾನ ಮತ್ತು ಸುವರ್ಣ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುರೇಶ ಕೋಳೆಕರ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಶ್ರೇಷ್ಠ ಕಾರ್ಯ ಮಾಡಿದ್ದು ಅವರ ವಿದ್ಯಾರ್ಥಿಗಳು ಎಲ್ಲ ಇಲಾಖೆಗಳಲ್ಲಿ ರಾಜ್ಯದ ಎಲ್ಲ ಕಡೆ ಇದ್ದು ಅವರಂತೆ ನಾವೆಲ್ಲರೂ ನೆನಪಿಡುವ ಕಾರ್ಯ ಮಾಡಬೇಕಾಗಿದೆ ಎಂದರು.
ಶ್ರೀ ಶಾಂತೇಶ್ವರ ಪ್ರೌಢಶಾಲೆಯ ಉಪಪ್ರಾಚಾರ್ಯ ಎ.ಪಿ.ಬಿರಡ ಮಾತನಾಡಿ 1989-90 ವಿದ್ಯಾರ್ಥಿಗಳು ಇಂಡಿಯ ಶ್ರೀ ಶಾಂತೇಶ್ವರ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿವರ್ಷ ವಿದ್ಯಾರ್ಥಿ ವಿಜಯಕರ್ನಾಟಕ ಪತ್ರಿಕೆ ನೀಡುತ್ತಿದ್ದು ಸೇರಿದಂತೆ ಅನೇಕ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಶ್ರೀಧರ ಹಿಪ್ಪರಗಿ ಮಾತನಾಡಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸುರೇಶ ಕೋಳೆಕರ ಇವರ ಹೆಸರಿನಲ್ಲಿ ಸ್ಪೂರ್ತಿ ನೀಡುತ್ತಿರುವದು ಸ್ಮರಣೀಯ. 89-90 ನೇ ಸಾಲಿನ ವಿದ್ಯಾರ್ಥಿ ಬಳಗದ ಕಾರ್ಯ ಪ್ರಸಂಶನೀಯ ಎಂದರು.
ಇದೇ ವೇಳೆ ಸಾಧಕರಾದ ನಿವೃತ ಕರ್ನಲ ಸನತಕುಮಾರ ಧನಶೆಟ್ಟಿ, ರಾಷ್ಟ್ರೀಯ ಕೃಷಿ ಪ್ರಶಸ್ತಿ ವಿಜೇತ ಭೀರಪ್ಪ ವಗ್ಗಿ, ಯೋಗ ಗುರು ಬಿ.ಎಸ್.ಪಾಟೀಲ, ಸಾಯಿಕಿರಣ ಸುರೇಶ ಕೋಳೆಕರ , ರಾಜ್ಯ ಪ್ರಶಸ್ತಿ ವಿಜೇತ ಕುಸ್ತಿ ಪಟು ಅಭಿಷೇಕ ಬಾನಪ್ಪ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.
ಸನ್ಮಾನಿತ ಸನತಕುಮಾರ ಧನಶೆಟ್ಟಿ, ಯೋಗಗುರು ಬಿ.ಎಸ್.ಪಾಟೀಲ, ಸಾಯಿಕುಮಾರ ಕೋಳೆಕರ,ಸೋನಿ ಇಂಡಿಯಾ ಸಾಪ್ಟವೇರ ಆಡಳಿತ ಮುಖ್ಯಸ್ಥ ಮುತ್ತುರಾಜ ಅಡಿಗ, ಉಮೇಶ ಪತ್ರಿಮಠ, ಸುರೇಶ ಪಾಟೀಲ,ಮಿಟ್ಟುಸಾಬ ಶೇಖ, ಗಂಗಾಧರ ಪೂಜಾರಿ, ಡಾ|| ಮಂಜುನಾಥ ಕೊಟೆನ್ನವರ, ಶಿಕ್ಷಕ ದಶರಥ ಕೋರಿ,ಸತ್ಯಕುಮಾರ ಕುಲಕರ್ಣಿ, ಕೃಷ್ಣ ಆಧ್ಯ ದಿವಗಂತ ಸುರೇಶ ಕೋಳೆಕರ ಸ್ಮರಿಸಿ ಮಾತನಾಡಿದರು.
ಸಮಾರಂಭದಲ್ಲಿ ಸಬ್ ರಜಿಸ್ಟ್ರಾರ ಮಹಮ್ಮದ ರಫೀಕ ಪಟೇಲ, ಶಾಂತು ಧನಶೆಟ್ಟಿ, ನ್ಯಾಯವಾದಿ ರಮೇಶ ಕುಲಕರ್ಣಿ, ಪ್ರದೀಪ ಮುರಗಂಡಿ, ಬಾಬು ಬಿರಾದಾರ, ಬಸವರಾಜ ದೇವರ, ರವಿ ವಂದಾಲ, ಸುರೇಶ ಅವರಾದಿ, ಸುನೀಲ ಪಾಟೀಲ,ರಾಜು ಹಿಬಾರೆ, ಉಮೇಶ ಶಿವಯೋಗಿಮಠ, ಚಂದನ ಧನಪಾಲ,ಅನೀಲ ಬಡಿಗೇರ,ಬಸವರಾಜ ಚೌಧರಿ,ಷಹಾಜಿ ಪಾಟೀಲ,ಶಿವಾಜಿ ಮಹೀಂದ್ರಕರ, ಮಾಜಿ ಸೈನಿಕ ಮಹಾದೇವ ನಿಂಗಾರಿ, ರಾಮ ಸಾಳುಂಕೆ, ಸರ್ವೇ ಇಲಾಖೆಯ ರವಿ ನಾಯಕ, ಶಾಂತುಗೌಡ ಬಿರಾದಾರ,ಬಾಬು ಸುಲಾಖೆ, ಡಾ|| ವಿಪುಲ ಕೋಳೆಕರ, ಹುಸೇನಿ ಮಕಾನದಾರ,ತೋಳನೂರ ಮತ್ತಿತರಿದ್ದರು.
ಇದೇ ವೇಳೆ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದ ಶ್ರೀಧರ ಹಿಪ್ಪರಗಿ ಇವರಿಗೆ ಒಂದು ಲಕ್ಷ ಐವತ್ತು ಸಾವಿರ ರೂ ಚೆಕ್ಕು ಗೆಳೆಯರ ಬಳಗದ ಜಂಟಿ ಖಾತೆಯಲ್ಲಿ ಇಡಲು ಚೆಕ್ ನೀಡಿದರು.