ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಣೆ
ಮಾಲೂರು. ಜೂ.೧೦- ಲಕ್ಕೂರು ಹೋಬಳಿ ಚಿಕ್ಕತಿರುಪತಿ ಕ್ಲಸ್ಟರ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೊಲ್ಲಹಳ್ಳಿ ಶಾಲೆಗೆ ಪ್ರತಿವರ್ಷ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಗೊಲ್ಲಹಳ್ಳಿ ಗ್ರಾಮದ ಶಾಲೆಯ ಹಳೆ ವಿದ್ಯಾರ್ಥಿಯಾದ ಸುನಿಲ್ ಅವರು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ನಾನು ಶಾಲಾ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಾಗ್ ಲೇಖನಿ ಸಾಮಗ್ರಿಗಳನ್ನು ಪ್ರತಿ ವರ್ಷ ನೀಡುತ್ತಾ ಬಂದಿದ್ದು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಸರ್ಕಾರ ನೀಡುವ ಸವಲತ್ತುಗಳು ಹಾಗೂ ದಾನಿಗಳು ನೀಡುವ ಸವಲತ್ತುಗಳನ್ನು ಬಳಸಿಕೊಂಡು ಶಾಲೆಗಳಲ್ಲಿ ಶಿಕ್ಷಕರು ಮಾಡುವ ಪಾಠ ಪ್ರವಚನಗಳನ್ನು ಕೇಳಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿರುವವರು ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾವು ದುಡಿದ ಹಣದಲ್ಲಿ ಸ್ವಲ್ಪ ಭಾಗವನಾದರೂ ವಿನಿಯೋಗ ಮಾಡುವಂತೆ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ಸೌಲಭ್ಯ ನೀಡಲು ಲಕ್ಷಾಂತರ ರೂಗಳು ಖರ್ಚು ಮಾಡುತ್ತಿದೆ ಪ್ರತಿಯೊಬ್ಬ ಪೋಷಕರು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವುದರ ಮೂಲಕ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿ ಹೊಂದಲು ಸಹಕರಿಸುವಂತೆ ಹೇಳಿದರು.
ಶಾಲಾ ಅಭಿವೃದ್ಧಿ ಸಮಿತಿ ಅದ್ಯಕ್ಷ ರಾಮಸ್ವಾಮಿ ,ಮುಖ್ಯೋಪಾಧ್ಯಾಯ ಎಚ್ ಟಿ ಕೃಷ್ಣಪ್ಪ, ಅತಿಥಿ ಶಿಕ್ಷಕಿ ರಾಧಾ ಎಂ, ಹಾಗೂ ಶಾಲೆಯ ಮಕ್ಕಳ ಪೋಷಕರು ಹಾಜರಿದ್ದರು.