ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಿ: ನಾಗರಾಜ ಕನ್ನೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.10: ಜಮೀನುಗಳಲ್ಲಿ ಕೃಷಿ ಕಾರ್ಯಗಳ ಜೊತೆಗೆ ಕೃಷಿ ಉಪಕಸಬುಗಳನ್ನು ಮಾಡಲು ರೈತರು ಆಸಕ್ತಿ ವಹಿಸಬೇಕು. ಸರ್ಕಾರದಿಂದ ದೊರೆಯುವ ರಿಯಾಯಿತಿಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಖ್ಯ ಪಶುವೈದ್ಯಾಧಿಕಾರಿ ನಾಗರಾಜ ಕನ್ನೂರ ಹೇಳಿದರು.
ತಿಕೋಟಾ ಪಟ್ಟಣದ ವಿರಕ್ತಮಠದಲ್ಲಿ ಸ್ಥಳೀಯ ಕೆನರಾ ಬ್ಯಾಂಕ್ ಆಯೋಜಿಸಿದ್ದ ಕೃಷಿ ಸಾಲ ಮೇಳದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಜಮೀನು ಅಭಿವೃದ್ಧಿ ಮಾಡುವುದರ ಜೊತೆಗೆ ಹೈನುಗಾರಿಕೆ ಸಲುವಾಗಿ ಎಮ್ಮೆ, ಹಸು, ಕುರಿ ಹಾಗೂ ಕೋಳಿ ಸಾಕಾಣಿಕೆ ಹೀಗೆ ವಿವಿಧ ಉದ್ದೇಶಗಳ ಸಲುವಾಗಿ ಕೆನರಾ ಬ್ಯಾಂಕ್ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿದೆ. ಜೊತೆಗೆ ಸರ್ಕಾರದಿಂದ ದೊರೆಯುವ ರಿಯಾಯಿತಿ ಸೌಲಭ್ಯಗಳನ್ನು ಒದಗಿಸುವುದು ಕೆನರಾ ಬ್ಯಾಂಕಿನ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.
ಕೆನರಾ ಬ್ಯಾಂಕಿನ ಕೃಷಿ ವಿಸ್ತರಣಾ ಅಧಿಕಾರಿ ಶೀತಲ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ತಿಕೋಟಾ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪಿ.ಕೆ.ಪಿ.ಎಸ್. ಲೆಕ್ಕಿಗ ಶಿವಾನಂದ. ಚೌಧರಿ ಹಾಗೂ ಪ್ರಗತಿಪರ ರೈತ ಮಲ್ಲಿಕಾರ್ಜುನ. ಹಂಜಗಿ ಭಾಗವಹಿಸಿದ್ದರು.
ಸ್ಥಳೀಯ ಬ್ಯಾಂಕ್ ಶಾಖಾಧಿಕಾರಿ ಸಂತೋಷ ಕೊಲ್ಹಾರ ಸ್ವಾಗತಿಸಿ, ನಿರೂಪಿಸಿದರು. ಮುತ್ತು ಹಂಜಗಿ ವಂದಿಸಿದರು.