ವಿದ್ಯುತ್ ಕಂಬ ತಂತಿ ಬದಲಿಸುವಂತೆ ಶಾಸಕ ಮಂಜು ಸೂಚನೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.10: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಂಬಗಳ ಅವಸ್ಥೆ ಕಂಡು ಹೌಹಾರಿದ ಶಾಸಕ ಹೆಚ್.ಟಿ.ಮಂಜು.
ಚೆಸ್ಕಾಂ ಇಲಾಖೆಯವರ ನಿರ್ಲಕ್ಷ್ಯಕ್ಕೆ ಈಗಾಗಲೇ ತಾಲ್ಲೂಕಿನಾದ್ಯಂತ ಜನ ಜಾನುವಾರುಗಳು ಬಲಿಯಾಗಿದ್ದು ಕೂಡಲೇ ಹಳೆಯ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಬದಲಿಸಬೇಕು ಎಂದು ಚೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಕಾರ್ಯನಿಮಿತ್ತ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಚಿಕ್ಕಗಾಡಿನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಗ್ರಾಮದೊಳಗಿರುವ ವಿದ್ಯುತ್ ಸರಬರಾಜು ಕಂಬ ಮತ್ತು ವೈರ್‍ಗಳ ಶಿಥಿಲಗೊಂಡಿರುವುದನ್ನು ಕಂಡು ಹೌಹಾರಿದರು. ಇದರ ಬಗ್ಗೆ ತಕ್ಷಣ ಚೆಸ್ಕಾಂ ಕಾರ್ಯಪಾಲಕ ಅಭಿಯಂತರರು ಮತ್ತು ಸೂಪರಿಂಟೆಂಡೆಂಟ್ ಇಂಜಿನಿಯರ್ ರವರಿಗೆ ಫೆÇೀನ್ ಮೂಲಕ ಸಂಪರ್ಕಿಸಿ, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಈಗಾಗಲೇ ವಿದ್ಯುತ್ ಅವಘಡ ಸಂಭವಿಸಿ ಹಲವು ಜನ ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಮತ್ತೆ ಏನಾದರೂ ಅವಘಡ ಸಂಭವಿಸಿದರೆ ನಿಮ್ಮನ್ನೇ ಜವಾಬ್ದಾರಿ ಮಾಡಬೇಕಾಗುತ್ತದೆ. ಗ್ರಾಮದಲ್ಲಿ ಶಿಥಿಲವಾಗಿರುವ ವಿದ್ಯುತ್‍ತಂತಿ ಮತ್ತು ಕಂಬಗಳನ್ನು ತಕ್ಷಣ ಬದಲಾಯಿಸುವಂತೆ ಎಚ್ಚರಿಸಿದರು.
ಕಳೆದ ವಾರವಷ್ಟೆ ಕಿಕ್ಕೇರಿ ಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಜಮೀನಿಗೆ ತೆರಳುವ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸದೇ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಹಸಿರಾಗಿರುವಾಗಲೇ ಇನ್ನೂ ಎಷ್ಟು ಜೀವಗಳನ್ನು ಬಲಿ ಪಡೆಯಬೇಕು. ಜೀವಗಳಿಗೆ ಬೆಲೆ ಇಲ್ಲವೇ. ತಾಲ್ಲೂಕಿನಾದ್ಯಂತ ಹಳೆಯ ವಿದ್ಯುತ್ ಕಂಬಗಳನ್ನು ಬದಲಿಸಲು ಈಗಾಗಲೇ ಹಲವು ಬಾರಿ ತಿಳಿಸಿದ್ದೇನೆ. ಆದರೂ ನೀವುಗಳು ನಿರ್ಲಕ್ಷ್ಯತೆ ತೋರುತ್ತಿರುವುದು ಸರಿಯಾದುದಲ್ಲ. ಹಲವಾರು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡು ಕಂಬಗಳೇ ಕಾಣದಂತಾಗಿವೆ. ಹೀಗಿದ್ದರೂ ಅವುಗಳನ್ನು ತೆರವುಗೊಳಿಸದೇ ಇರುವುದು ನಿಮ್ಮ ಕರ್ತವ್ಯ ನಿರ್ಲಕ್ಷತೆಯನ್ನು ತೋರಿಸುತ್ತದೆ. ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ಈ ಭೇಟಿ ಸಮಯದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪರಮೇಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಶೇಖರ್, ಗ್ರಾಮ ಪಂಚಾಯತಿ ಸದಸ್ಯ ಪಲ್ಲವಿಗಣೇಶ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಿದ್ದಯ್ಯ, ಗ್ರಾಮದ ಮುಖಂಡರಾದ ಶಿವಯ್ಯ, ಚೆಲುವರಾಜ್, ಲೋಕೇಶ, ಮಹೇಶ್, ಕ್ರಾಂತಿ ಬಸವರಾಜ್ ಸೇರಿದಂತೆ ಹಲವರು ಹಾಜರಿದ್ದರು.