ಮೂರನೇ ಭಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ: ಚಾಮರಾಜನಗರದಲ್ಲಿ ವಿಜಯೋತ್ಸವ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 10- ರಾಷ್ಟ್ರದ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಚಾಮರಾಜನಗರದ ವಿವಿಧ ಕಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ಪ್ರಮುಖ ವೃತ್ತಗಳಲ್ಲಿ ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಮೋದಿ ಭಾವಚಿತ್ರಕ್ಕೆ ಪುಷ್ಪ ವೃಷ್ಠಿ ಮಾಡಿದರು. ಅಲ್ಲದೇ ಯುವಕರು ಬಿಜೆಪಿ ಬಾವುಟ ಹಿಡಿದು ಬೈಕ್ ರ್ಯಾಲಿಯನ್ನು ಸಹ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಟರಾಜು, ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಎನ್‍ಡಿಎ ಮೈತ್ರಿಕೂಟದಿಂದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಹೆಮ್ಮೆ ತಂದಿದೆ. ಎರಡು ಅವಧಿಯಲ್ಲಿ ಅವರು ಮಾಡಿರುವ ಸಾಧನೆಯನ್ನು ನೀಡಿ, ದೇಶದ ಜನರು ಮತ್ತೊಮ್ಮೆ ಅವರು ಪ್ರಧಾನಿಯಾಗಬೇಕೆಂದು ಕನಸು ಕಂಡಿದ್ದರು. ಅದರಂತೆ ಇಂದು ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಚಾ.ನಗರದಲ್ಲಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಸಂಭ್ರಮಿಸುತ್ತಿದ್ದೇವೆ ಎಂದರು.
ಅದೇ ರೀತಿ ನಮ್ಮ ನಾಯಕರಾದ ವಿ. ಸೋಮಣ್ಣ ಅವರು ಸಹ ಮೋದಿ ಅವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಪಡೆದಿದ್ದು, ಹೆಚ್ಚಿನ ಸಂತೋಷ ತಂದಿದೆ. ತುಮಕೂರು ಸಂಸದರಾಗಿ ಆಯ್ಕೆಯಾಗುತ್ತಿದ್ದಂತೆ ಅವರಿಗೆ ರಾಷ್ಟ್ರೀಯ ವರಿಷ್ಠರು ಸಚಿವರನ್ನಾಗಿ ಮಾಡಿರುವುದು ಅವರ ಸಂಘಟನೆಯ ಚತುರತೆಯನ್ನು ತೋರಿಸುತ್ತದೆ ಎಂದು ನಟರಾಜು ಹರ್ಷ ವ್ಯಕ್ತಪಡಿಸಿದರು.
ನಾಗಪ್ಪಶೆಟ್ಟರ ಚೌಕದಲ್ಲಿ ಸಂಭ್ರಮ : ಮಾಜಿ ನಗರಸಭಾ ರಾಜೇಶ್ ನೇತೃತ್ವದಲ್ಲಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮೋದಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೋದಿಪರ ಜೈ ಕಾರ ಹಾಕಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನಗರದ ನಾಗಪ್ಪಶೆಟ್ಟರ ಚೌಕದಲ್ಲಿಯು ಸಹ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜೈಶ್ರೀರಾಮ್ ಹಾಗೂ ಮೋದಿ, ಮೋದಿ, ಮೋದಿ ಎನ್ನುವ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷ ಶಿವರಾಜು, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಆರ್. ಸುಂದರ್, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಡಾ. ಬಾಬು, ಎಸ್. ಬಾಲಸುಬ್ರಮಣ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಮನೋಜ್‍ಪಟೇಲ್, ವಿಜಯೇಂದ್ರ, ಸೂರ್ಯಬಾಲರಾಜು, ವಿರಾಟ್ ಶಿವು, ಜಯರಾಮಶೆಟ್ಟಿ, ಮಂಜುನಾಥ್, ಕೂಸಣ್ಣ, ಜಯಸುಂದರ್, ಮಾರ್ಕೆಟ್ ಕುಮಾರ್, ಉತ್ತುವಳ್ಳಿ ಮಹೇಶ್, ಮಹದೇವನಾಯಕ, ಲೋಕೇಶ್, ಬಂಗಾರು, ಪರಶಿವ, ಕೇಬಲ್ ರಂಗಸ್ವಾಮಿ ಮೊದಲಾದವರು ಇದ್ದರು.