ದಿ.ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕಾಣಿಕೆ ಮರೆಯುವಂತಿಲ್ಲ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೯; ಬೆಂಗಳೂರಿನ ಯಾವುದೇ ಸಂಸ್ಥೆಯವರು ಮಾಡದ ಕಾರ್ಯಕ್ರಮವನ್ನು ದಾವಣಗೆರೆಯ ಸಿನಿಮಾ ಸಿರಿ ಮಾಡುತ್ತಿರುವುದು ಶ್ಲಾಘನೀಯ ಎಂದು ಚಲನಚಿತ್ರ ನಿರ್ದೇಶಕ ಎಚ್.ಆರ್. ಭಾರ್ಗವ ಹೇಳಿದರು.ನಗರದ ಎಂ.ಸಿ.ಮೋದಿ ವೃತ್ತದಲ್ಲಿನ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಇತ್ತೀಚಿಗೆ ಸ್ವರ್ಗಸ್ತರಾದ ನಾಡಿನ ಖ್ಯಾತ ಹಾಸ್ಯ ಚಲನಚಿತ್ರ ನಟ, ನಿರ್ಮಾಪಕ ನಿರ್ದೇಶಕರ ಕೀರ್ತಿಶೇಷ ದ್ವಾರಕೀಶ್ ಅವರಿಗೆ ಅವರದ್ದೇ ಚಲನಚಿತ್ರದ ಗಾಯನದೊಂದಿಗೆ ಗಾನನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರುಮೊಟ್ಟ ಮೊದಲು 1964-65 ರಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಚಿತ್ರದ ಡಾಕ್ಯುಮೆಂಟರಿ ತಯಾರಿಸಲು ಬಂದಿದ್ದೆ.ಸಿನಿಮಾ ಸಿರಿಯ ಮೂರು ಕಾರ್ಯಕ್ರಮ ಭಾಗವಹಿಸಿದ್ದೇನೆ.ಕನ್ನಡದಲ್ಲಿ ಐವತ್ತು ಚಿತ್ರ ನಿರ್ದೇಶಕನಾಗಿ ಕೆಲಸ ಮಾಡಿರುವೆ. ಕಲಿಯುವುದು ಬಹಳ ಇದೆ. ಹಾಗಾಗಿಯೇ ಇಷ್ಟು ಚಿತ್ರಗಳ ನಿರ್ದೇಶಕನಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.ದ್ವಾರಕೀಶ್ ಅವರು ಮೇಯರ್ ಮುತ್ತಣ್ಣ ಚಿತ್ರದ ಸಹ ನಿರ್ದೇಶಕ, ಪ್ರೊಡಕ್ಷನ್ಸ್ ಮ್ಯಾನೇಜರ್ ಆಗಿ ಕೆಲಸ ನೀಡಿದರು.ಸಂಸಾರ ನಡೆಸುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ದ್ವಾರಕೀಶ್ ಕೆಲಸ ಕೊಟ್ಟಿದ್ದನ್ನು ಸ್ಮರಿಸಿದರು.ಭಾಗ್ಯವಂತರು ನೀಡಿದ ಮೊದಲ ಅವಕಾಶ ನನ್ನನ್ನು ಭಾಗ್ಯವಂತನನ್ನಾಗಿ ಮಾಡಿತು.
ದ್ವಾರಕೀಶ್ ವಿಷ್ಣುವರ್ಧನ್ ಜೋಡಿ ಆಪ್ತಮಿತ್ರ ಚಿತ್ರದವರೆಗೆ ಮುಂದುವರೆಯಿತುಎಂದು ತಿಳಿಸಿದರು.ದ್ವಾರಕೀಶ್ ಕಣ್ಮರೆಯಾದರೂ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕಾಣಿಕೆ ಮರೆಯುವಂತಿಲ್ಲ. ದ್ವಾರಕೀಶ್ ಮಾಡದೇ ಇರುವ ಕೆಲಸವೇ ಇಲ್ಲ. ದ್ವಾರಕೀಶ್ ಮತ್ತೋರ್ವ ಒಳ್ಳೆಯ ಕನಸುಗಾರ ಎಂದು ಬಣ್ಣಿಸಿದರು.ದ್ವಾರಕೀಶ್ ಸಿಂಗಾಪುರದಲ್ಲಿ ರಾಜಕುಳ್ಳ ಸಂಪೂರ್ಣ ವಿದೇಶದಲ್ಲಿ ತೆಗೆದ ಮೊದಲ ಕನ್ನಡದ ಚಿತ್ರ.  ಆಫ್ರಿಕಾದಲ್ಲಿ ಶೀಲಾ ಚಿತ್ರ ಅಗಲೇ ಪ್ಯಾನ್ ಇಂಡಿಯಾ ಚಿತ್ರವಾಗಿತ್ತು.ದ್ವಾರಕೀಶ್ ಅವರಿಗೆ ಲಂಡನ್‌ ನಲ್ಲಿ ಒಂದು ಹಾಡಿನ ರೆಕಾರ್ಡ್ ಮಾಡಿದರು.‌ ಕಿಶೋರ್ ಕುಮಾರ್ ಅವರಿಂದಲೇ ಹಾಡು ಹಾಡಿಸಿದ ಕೀರ್ತಿ ದ್ವಾರಕೀಶ್ ಗೆ ಸಲ್ಲುತ್ತದೆ. ಸಾಕಷ್ಟು ನಿದರ್ಶನಗಳು ಇವೆ. ಕಂಡ ಎಲ್ಲ ಕನಸು ಈಡೇರಿಸಿದವರು ಎಂದು ತಿಳಿಸಿದರು.ಸತತವಾಗಿ ಹದಿನೆಂಟು ಚಿತ್ರ ಲಾಸ್ ಆದರೂ ಧೈರ್ಯದಿಂದ ಇರುತ್ತಿದ್ದರು. ಕೊನೆಗೆ ವಿಷ್ಣುವರ್ಧನ್ ಜೊತೆಗೆ ಆಪ್ತಮಿತ್ರ ಚಿತ್ರ ಮಾಡಿದವರು. ಅದೇ ಚಿತ್ರದಿಂದ ಆಪ್ತಮಿತ್ರ ರು ದೂರವಾದರು. ಪತ್ನಿ ತೀರಿ ಹೋದ ನಂತರ ಸಾಕಷ್ಟು ಮೌನಿ ಆಗಿದ್ದರು. ಇರುವವ ರೆಗೆ ಚೆನ್ನಾಗಿಯೇ ಬಾಳಿದವರು ಎಂದು ತಿಳಿಸಿದರು.