ಮಳೆಗಾಲ, ಸೈಕಲ್ ಏರಿ ನಗರ ಸಂಚಾರ ನಡೆಸಿದ  ಜಿಲ್ಲಾಧಿಕಾರಿ
* ನಗರದಲ್ಲಿನ ರಾಜ ಕಾಲುವೆಗಳ ಪರಿಶೀಲನೆ
* ರಸ್ತೆಗಳಲ್ಲಿನ ತಗ್ಗು ಗುಂಡಿ ಮುಚ್ಚಲು ಸೂಚನೆ
* ನಗರಸಭೆ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಸಂಚಾರ
* ನಗರ ಪ್ರದಕ್ಷಿಣೆ, ಸ್ವಚ್ಛತೆಗೆ ಮೊದಲ ಆಧ್ಯತೆಗೆ ಸೂಚನೆ.
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ9: ಲೋಕಸಭಾ ಹಾಗೂ ವಿಧಾನಪರಿಷತ್ ಚುನಾವಣೆ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಬಿಡುವಿಲ್ಲದಿದ್ದರು ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವ ಮೂಲಕ ವಿಪತ್ತು ನಿರ್ವಹಣೆಯನ್ನು ನಿರ್ವಹಿಸಿದ್ದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಶನಿವಾರ ಹೊಸಪೇಟೆ ನಗರ ಪ್ರದಕ್ಷಿಣೆಯ ಮೂಲಕ ಹೊಸಪೇಟೆಯಲ್ಲಿ ಸೈಕಲ್ ಸವಾರಿ ನಡೆಸಿದರು.
ಭಾರತ ಚುನಾವಣಾ ಆಯೋಗವು ಜೂನ್ 06ರಂದು ಹೊರಡಿಸಿದ ಮಾದರಿ ನೀತಿ ಸಂಹಿತೆ ತೆರವಿನ ಆದೇಶದೊಂದಿಗೆ ಲೋಕಸಭಾ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮುಕ್ತಾಯಗೊಂಡ ಬೆನ್ನಲ್ಲೇ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಶನಿವಾರ ರಜೆ ಅವಧಿಯಲ್ಲೂ ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ನಗರದ ವಿವಿಧೆಡೆ ಸಂಚರಿಸಿ, ಮಳೆಗಾಲ ಹಿನ್ನೆಲೆಯಲ್ಲಿ ವಿವಿಧೆಡೆಗಳಲ್ಲಿನ ರಸ್ತೆಗಳು ಮತ್ತು ಚರಂಡಿಗಳ ಸ್ಥಿತಿಗತಿ ಪರಿಶೀಲಿಸಿದರು. ಜನನಿಬಿಡ ಪ್ರದೇಶದಲ್ಲಿ ಸ್ವಚ್ಛತೆಯನ್ನು ಸೈಕಲ್ ಮೂಲಕ ಪರಿಶೀಲಿಸಿದರು.
ಮೊದಲಿಗೆ ನಗರದ ವಿವಿಧೆಡೆಯಲ್ಲಿನ ರಾಜಕಾಲುವೆಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಗಳು ಈಗಾಗಲೇ ಸುರಿಯಲಾರಂಭಿಸಿದ್ದು ರಾಜ ಕಾಲುವೆಗಳಲ್ಲಿ ಪ್ಲಾಸ್ಟಿಕ್ ಬಾಟಲ್, ಇತರೆ ಕಸ ಕಡ್ಡಿಗಳಿಂದ ನೀರು ನಿಂತು ರಸ್ತೆ ಮೇಲೆ ಹರಿಯದಂತೆ ನಗರದ ಎಲ್ಲಾ ಕಡೆಗಳಲ್ಲಿನ ಕಾಲುವೆಗಳನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಜಿಲ್ಲಾಧಿಕಾರಿಗಳು ಹೊಸಪೇಟೆ ನಗರದ ಬೇರೆ ಬೇರೆ ವಾರ್ಡಗಳಿಗೆ ಭೇಟಿ ನೀಡಿದರು.  ಕುಡಿವ ನೀರಿನ ಸರಬರಾಜು ಮತ್ತು ನೈರ್ಮಲ್ಯದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ನಗರದ ವಿವಿಧೆಡೆಯ ರಸ್ತೆಗಳಲ್ಲಿ ಸಂಚರಿಸುವ ವೇಳೆ ತಗ್ಗು ಗುಂಡಿಗಳನ್ನು ಸಹ ಗಮನಿಸಿದ ಜಿಲ್ಲಾಧಿಕಾರಿಗಳು, ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಖ್ಯ ರಸ್ತೆಗಳು ತಗ್ಗು ಗುಂಡಿಗಳಿಂದ ಮುಕ್ತವಾಗಿರುವಂತೆ ಕ್ರಮ ವಹಿಸಬೇಕು. ಸ್ಪೀಡ್ ಬ್ರೇಕರ್, ರಸ್ತೆ ತಿರುವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಕಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಹವಾಲು ಸ್ವೀಕಾರ:
ಪೌರಕಾರ್ಮಿಕರು ವಾಸಿಸುತ್ತಿರುವ ಪ್ರದೇಶಗಳಿಗೆ ಸಹ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಕೆಲವು ಪೌರ ಕಾರ್ಮಿಕ ಕುಟುಂಬದವರಿಂದ ಅಹವಾಲನ್ನು ಸ್ವೀಕರಿಸಿದರು. ವಿವಿಧೆಡೆಗಳಂತೆ ಪೌರ ಕಾರ್ಮಿಕರು ವಾಸಿಸುತ್ತಿರುವ ಪ್ರದೇಶದಲ್ಲಿನ ರಸ್ತೆಗಳು, ಚರಂಡಿ ವ್ಯವಸ್ಥೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ತಿಳಿಸಿದರು.
ಡಿಪಿಆರ್ ಸಿದ್ಧಪಡಿಸಲು ಸೂಚನೆ:
ಪ್ರಸಿದ್ದ ಪ್ರವಾಸಿ ತಾಣವಾಗಿರುವ ಹಂಪಿಯ ಪ್ರದೇಶಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ದಿಶೆಯಲ್ಲಿ  ಉತ್ತಮ ರಸ್ತೆ, ಶೌಚಾಲಯ ಮತ್ತು ಕುಡಿಯುವ ನೀರಿನ ಮೂಲಭೂತ ಸೌಕರ್ಯಗಳನ್ನು ಹೊಂದಿ ಹೊಸಪೇಟೆಯು ಸುಂದರ ನಗರವಾಗಿ ಕಾಣಬೇಕು. ಮುಖ್ಯವಾಗಿ ನೈರ್ಮಲ್ಯ ಕಾಪಾಡಲು ವೈಜ್ಞಾನಿಕ ರೀತಿಯಲ್ಲಿ ಚರಂಡಿ ವ್ಯವಸ್ಥೆ ಸರಿಪಡಿಸಲು ಬೇಕಾಗುವ ಡಿಪಿಆರ್ ಅನ್ನು ತಯಾರಿಸಲು ಜಿಲ್ಲಾಧಿಕಾರಿಗಳು  ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆರೋಗ್ಯ ನಿರೀಕ್ಷಕರಿಗೆ ಸೂಚನೆ:
ಮಳೆಗಾಲ ಹಿನ್ನೆಲೆಯಲ್ಲಿ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮುತುವರ್ಜಿ ವಹಿಸಿ ಕೆಲಸಗಾರರ ತಂಡಗಳನ್ನು ರಚಿಸಿಕೊಂಡು ಕಾರ್ಯನಿರ್ವಹಿಸಬೇಕು. ಮೌಖಿಕ ಸೂಚನೆ ನೀಡಿದಾಗ್ಯೂ ಯಾವುದೇ ಕಡೆಗಳಲ್ಲಿ ಅನೈರ್ಮಲ್ಯದ ಬಗ್ಗೆ ದೂರುಗಳು ಬಂದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕರುಗಳನ್ನು ಹೊಣೆಯಾಗಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.