ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ.
ಸಂಜೆವಾಣಿ ವಾರ್ತೆ
ಸಿರಿಗೇರಿ. ಜೂ.9. ನಮ್ಮ ಜೀವನದಲ್ಲಿ ಶಿಕ್ಷಣ ಅತಿ ಪ್ರಾಮುಖ್ಯತೆ ಪಡೆದಿದೆ. ಉತ್ತಮ ಶಿಕ್ಷಣ ಒಂದು ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ನಿಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಗದಗ ಜಿಲ್ಲೆ, ಶಿರಹಟ್ಟಿ ತಾಲೂಕಿನ ದಲಿತ ಮುಖಂಡ ಮುತ್ತು ಬಾವಿಮನಿ ತಿಳಿಸಿದರು. ನಿನ್ನೆ ಸಂಜೆ ಸಿರುಗುಪ್ಪ ತಾಲೂಕು ಸಿರಿಗೇರಿ ಸಮೀಪದ ಮುದ್ದಟನೂರು  ನವಗ್ರಾಮದಲ್ಲಿ ನಡೆದ, ವಿದ್ಯಾರ್ಥಿಗಳ ಬೇಸಿಗೆ ಶಿಬಿರದ ಸಮಾರೋಪ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬಡ ಕುಟುಂಬದ ಯುವಕರು ಮುಂದಿನ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಜೀವನದಲ್ಲಿ ಒಂದು ಹಂತ ಮುಟ್ಟುವವರೆಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಸಾಧಿಸಬೇಕು. ಪೋಷಕರು ಅವರಿಗೆ ಸಹಕಾರ ಕಲ್ಪಿಸಬೇಕು. ಆರ್ಥಿಕವಾಗಿ  ಅಡಚಣೆ ಇದ್ದ ಪಾಲಕರು ಮಾಹಿತಿ ನೀಡಿದರೆ ಅಂತಹ ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಜನಪದ, ಹಾಡುಗಾರಿಕೆ, ಅಭಿನಯ, ಕಲೆಗಳು ಪ್ರದರ್ಶನಗೊಂಡವು. ವಕೀಲ ರಾಂಬಾಬ ವಿದ್ಯಾರ್ಥಿಗಳ ಬೇಸಿಗೆ ಶಿಬಿರದಲ್ಲಿ ಆಯೋಜಿಸಿದ ವಿವಿಧ ಕಾರ್ಯಕ್ರಮಗಳ ಕುರಿತು, ಸಹಕರಿಸಿದ ಶಿಕ್ಷಣ ಪ್ರೇಮಿಗಳು,  ಸಂಘಟನೆಗಳ ಮುಖಂಡರು, ಸಂಪನ್ಮೂಲ ವ್ಯಕ್ತಿಗಳು, ಎಸ್ ಡಿ ಎಂ ಸಿ ಅಧ್ಯಕ್ಷರು, ಶಿಕ್ಷಕರು, ಅಡಿಗೆ ಸಿಬ್ಬಂದಿಯವರು, ಸ್ಥಳೀಯ ಡಾ. ಬಿಆರ್. ಅಂಬೇಡ್ಕರ್ ಯುವಕ ಸಂಘದ ಯುವಕರು, ವಿದ್ಯಾರ್ಥಿಗಳ ಪೋಷಕರು ನೀಡಿದ ಸಹಕಾರವನ್ನು ನೆನೆದರು. ಶಿಕ್ಷಕಿ ರಾಧಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಂಬೇಡ್ಕರ್ ಸಂಘದ ಯುವಕರು ನಿರ್ವಹಿಸಿದರು.