ಕಾಯಕದಿಂದ ದಾಸೋಹ ಸಂಸ್ಕೃತಿ ಕಂಡುಕೊಂಡ  ಗಾಣಿಗ ಸಮುದಾಯ – ವನಶ್ರೀ ಸ್ವಾಮೀಜಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜೂ.9 :-  ಕಾಯಕದಿಂದ ದಾಸೋಹ  ಸಂಸ್ಕೃತಿಯನ್ನು ಕಂಡುಕೊಂಡ ಸಮುದಾಯ ಎಂದಿದ್ದರೆ ಅದು ಗಾಣಿಗ ಸಮುದಾಯ ಎಂದು ಹೇಳಬಹುದು ಎಂದು  ವಿಜಯಪುರ ವನಶ್ರೀ ಸಂಸ್ಥಾನದ ಪೀಠಾಧ್ಯಕ್ಷ ಡಾ.ಜಯಬಸವ ಕುಮಾರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಾನಹೊಸಹಳ್ಳಿಯ ಗಾಣಿಗರ ಸಮುದಾಯ ಭವನದಲ್ಲಿ ಅಖಿಲ ಭಾರತ ಗಾಣಿಗರ ಸಂಘದ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಲಿಂ.ಜಯದೇವ ಜಗದ್ಗುರು ಪುಣ್ಯಸ್ಮರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡುತ್ತಾ  ದುಡಿಯುವ ಹಾಗೂ ದುಡಿಯದವ ಎನ್ನುವ  ಶ್ರೇಷ್ಠ,  ಕನಿಷ್ಠ ಎಂಬ ಭಾವನೆಯನ್ನು ತೊಡೆದು ಹಾಕಿದ ಬಸವಣ್ಣನವರು ದುಡಿಯುವ ವ್ಯಕ್ತಿಗಳನ್ನು ದೇವರು ಎಂದು ಕರೆದಿದ್ದು ನಮಗೆ ದೊಡ್ಡವರಾಗಿ ಕಾಣುತ್ತಾರೆ. ಗಾಣಿಗ ಸಮುದಾಯವನ್ನು  ಜಾತಿಯಿಂದ ಗುರುತಿಸದೆ ಅವರ  ಕಾಯಕದಿಂದ ಗುರುತಿಸಿಕೊಂಡಿದೆ.  ಗಾಣಿಗ ಸಮುದಾಯದ ಪ್ರಗತಿಗೆ ಸರಕಾರಗಳು ಹೆಚ್ಚಿನ ಒತ್ತು ನೀಡಬೇಕು ಎಂದರಲ್ಲದೆ, ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಶಿಕ್ಷಣಕ್ಕೆ ಹೆಚ್ಚಿನ  ಆದ್ಯತೆ ನೀಡಬೇಕು. ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರದಂಥಹ  ನಾನಾ ಕಾರ್ಯಕ್ರಮಗಳನ್ನು ನಡೆಸುವ ಗಾಣಿಗರ ಸಂಘದ ಕಾರ್ಯ ಅನನ್ಯ ಎಂದು ಶ್ರೀಗಳು  ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ಗಾಣಿಗರ ಸಂಘದ ತಾಲೂಕು ಅಧ್ಯಕ್ಷ ಹಾರಕಬಾವಿ ಎಸ್.ಶೇಖರಪ್ಪ ಮಾತನಾಡಿ, ಗಾಣಿಗ ಸಮುದಾಯದ ಸಂಘಟನೆಯ ಮೂಲಕ ಈ ಭಾಗದಲ್ಲಿ ಸಮುದಾಯ ಭವನ ನಿರ್ಮಾಣದ ಜತೆಗೆ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಅಲ್ಲದೆ, ಪ್ರತಿವರ್ಷ ಗಾಣಿಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಚಿತ್ರದುರ್ಗ ಸೈಟ್ ಬಾಬಣ್ಣ ಮಾತನಾಡಿದರು. ತಾಲೂಕು ಗಾಣಿಗರ ಸಂಘದ ಸಹ ಕಾರ್ಯದರ್ಶಿ ಎ.ಎಸ್.ಕೊಟ್ರಪ್ಪ ಪ್ರಾಸ್ತಾವಿಕ ನುಡಿದರು. ಈ ಸಂದರ್ಭದಲ್ಲಿ ಗಾಣಿಗ ಸಮುದಾಯದ ಮುಖಂಡರಾದ ಮಹದೇವಪುರ ದಿನ್ನೆ ಮಲ್ಲಿಕಾರ್ಜುನ, ಜರ್ಮಲಿ ಜೆ.ಸಿ.ಧನಂಜಯ, ಹುರುಳಿಹಾಳು ಟಿ.ರೇಚಣ್ಣ, ಎಂ.ಬಿ.ಅಯ್ಯನಹಳ್ಳಿ ಯಜಮಾನಪ್ಪ, ಹುಲಿಕೆರೆ ಮಲ್ಲಪ್ಪ, ಬಣವಿಕಲ್ಲು ಕೆ.ಬಸವರಾಜ, ನಿವೃತ್ತ ಶಿಕ್ಷಕ ಕೊಟ್ರಪ್ಪ, ಚಿರತಗುಂಡು ಈಶ್ವರಪ್ಪ, ಹಾರಕಬಾವಿ ಕೊಟ್ರೇಶ್, ಕಾನಹೊಸಹಳ್ಳಿ ಕೆ.ಸುಭಾಶ್ಚಂದ್ರ, ಹರ್ಷ ಮೆಡಿಕಲ್ಸ್ ಮಂಜುನಾಥ, ಜರ್ಮಲಿ ಶಶಿಧರ, ಆಲೂರು ಕೆ.ಗುರುಮೂರ್ತಿ, ಹುಡೇಂ ಕೆ.ಆರ್.ಬಾಬಣ್ಣ, ಕೋಣನವರ ಮಲ್ಲಿಕಾರ್ಜುನ, ಬಿಇಒ ಪದ್ಮನಾಭ ಕರಣಂ ಸೇರಿ ಇತರರಿದ್ದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ತಾಲೂಕಿನ ಗಾಣಿಗ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ  ಎಸ್.ಕೆ.ಕೀರ್ತಿ, ಎಸ್.ಕೆ.ಸ್ಪೂರ್ತಿ ಪ್ರಾರ್ಥಿಸಿದರು. ಹಾರಕಬಾವಿ ಎಸ್.ಕೊಟ್ರೇಶ್, ಹಾರಕಬಾವಿ ಎರಿಸ್ವಾಮಿ, ಕಾನಹೊಸಹಳ್ಳಿ ಕೆ.ಎಸ್.ವೀರೇಶ್ ಕಾರ್ಯಕ್ರಮ ನಿರ್ವಹಿಸಿದರು.