ಶರಣರದು ಸರಳವಾದ ಬದುಕು
(ಸಂಜೆವಾಣಿ ವಾರ್ತೆ)
ಬಳ್ಳಾರಿ.ಜೂ 9: ಬಸವಾದಿ ಶರಣರು ತಮ್ಮ‌ಜೀವನದಲ್ಲಿ ಸರಳವಾದ ಬದುಕನ್ನು ಬದುಕಿ ಇಂದಿಗೂ ಮಾದರಿಯಾಗಿದ್ದಾರೆಂದು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಯು.ಶ್ರೀನಿವಾಸ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
 ಅವರು ತಾಲೂಕಿನ ಹಂದಿಹಾಳು ಗ್ರಾಮದ  ಶಿವಶರಣರ ಮಠದಲ್ಲಿ ಆಯೋಜಿಸಿದ್ದ  ಶಿವಚಿಂತನ ಗೋಷ್ಠಿಯಲ್ಲಿ ‘ವರ್ತಮಾನದ ಬದುಕಿಗೆ ವಚನಗಳೊಡನೆ ಅನುಸಂಧಾನ’ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಕಾಯಕವೆಂದರೆ ಬರೀ ಹೊಟ್ಟೆ ತುಂಬಿಸಿಕೊಳ್ಳುವ ಲೋಭದ ದಂಧೆಯೂ ಅಲ್ಲ. ಅದೊಂದು ಸತ್ಯ ಶುದ್ಧ ಜೀವನ ಮಾರ್ಗ ಎಂದು ಬಲವಾಗಿ ನಂಬಿದ್ದ ಶರಣರು ಕಾಯಕ ಮತ್ತು ದಾಸೋಹಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದರೆಂದರು.
ಸರಳಾದೇವಿ ಕಾಲೇಜಿನ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಮಾತನಾಡಿ  ಶರಣರು ಅಂದಿನ ಸಮಾಜದ ಹಲವು ಮೂಢನಂಬಿಕೆಗಳನ್ನು ಖಂಡಿಸುತ್ತ ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದವರು.ಕೆಳವರ್ಗ ಮತ್ತು ಮಹಿಳೆಯರನ್ನು ಶೋಷಿಸುವ ಜನರ ಕಣ್ಣು ಹೃದಯವನ್ನು ತೆರೆಸಲು ಯತ್ನಿಸಿದವರೆಂದರು.
 ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಜೋಳದರಾಶಿಯ ಕೆ.ಪಂಪನಗೌಡ ಶರಣರು ಜೀವಪರ ನಿಲುವುಗಳಿಗೆ ನಡೆ-ನುಡಿ ಶುದ್ಧತೆಗೆ ಆದ್ಯತೆಯನ್ನು ಕೊಟ್ಟವರು ಎಂದರು.
ಧರ್ಮದರ್ಶಿ ಡಾ.ಮಲ್ಲಿಕಾರ್ಜುನ ಗೌಡ ಪ್ರಸ್ತಾವಿಕ ಮಾತನಾಡಿ ಸಂಜೀವಿನಿಯಂತಿರುವ ಶರಣರ ವಿಚಾರಗಳನ್ನು ಅರಿತು ನಾವೆಲ್ಲರು ಪಾಲಿಸಬೇಕಾದ ಅಗತ್ಯವಿದೆಂದರು.
ಉಪನ್ಯಾಸಕ ಎ.ಎಂ.ಪಿ.ವೀರೇಶ ಸ್ವಾಮಿ, ನೀಲಕಂಠಪ್ಪ, ಡಾ.ಜಯಪ್ರಕಾಶ್ ನಿಡಗುಂದಿ ,ಡಾ.ಕೆ.ಶಿವಲಿಂಗಪ್ಪ ಹಂದಿಹಾಳು, ಚಾಂದಪಾಷಾ, ಸುಮನಾ ರೆಡ್ಡಿ, ವನಜಾಕ್ಷಿ, ಭ್ರಮರಾಂಭ ಯಾಟೆ ಮುಂತಾದವರು ಉಪಸ್ಥಿತರಿದ್ದರು.