ಜಗುಲಿಯ ಮೇಲೆ ಪುಸ್ತಕಗಳಿರಲಿ: ನಿಜಲಿಂಗ ದೊಡ್ಡಮನಿ
ಆಳಂದ: ಜೂ.9:ಮೂರ್ತಿ ಪೂಜೆ ಮಾಡುವುದರಿಂದ ದೇಶ ಬದಲಾಗುವುದಿಲ್ಲ. ವಿಚಾರಗಳಿಂದ ದೇಶ ಬದಲಾಗುತ್ತದೆ ಆದ್ಡರಿಂದ ನಿಮ್ಮ ಮನೆಯ ಜಗುಲಿಯ ಮೇಲೆ ದೇವರ ಬದಲು ಪುಸ್ತಕಗಳಿರಲಿ ಎಂದು ಉಪನ್ಯಾಸಕ ನಿಜಲಿಂಗ ದೊಡ್ಡಮನಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಳಕಿ (ಕೆ) ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಜನರು ಕಾಲ್ಪನಿಕ ದೇವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ತಮ್ಮಲ್ಲಿರುವ ಹಣವನ್ನು ದೇವರ ಹೆಸರಿನ ಮೇಲೆ ಖರ್ಚು ಮಾಡುವುದನ್ನು ಬಿಡಬೇಕು. ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಆ ಹಣ ಖರ್ಚು ಮಾಡಬೇಕು. ಯುವಕರು ವಿದ್ಯಾರ್ಥಿಗಳು ಬಾಬಾ ಸಾಹೇಬರ ವಿಚಾರಗಳನ್ನು ಸಮಾಜಕ್ಕೆ ಮುಟ್ಟಿಸುವ ಕೆಲಸ ಮಾಡಬೇಕು. ದೇಶದಲ್ಲಿ ತುಳಿತ್ತಕ್ಕೊಳಗಾದ ಜನರಿಗೆ ನ್ಯಾಯ ಒದಗಿಸುವ ಸಲುವಾಗಿ ಡಾ.ಅಂಬೇಡ್ಕರ್ ಶ್ರಮಿಸಿದ್ದಾರೆ. ವಿಶ್ವದ ಬಹುತೇಕ ದೇಶಗಳಿಗೆ ಸಂಚರಿಸಿ ನಮಗೆ ಅವಶ್ಯಕವಾಗಿರುವ ವಿಷಯಗಳನ್ನು ತಂದಿದ್ದಾರೆ.
ದೇಶದಲ್ಲಿನ ಹೆಣ್ಣು ಮಕ್ಕಳಿಗೆ ಕೀಳಾಗಿ ಕಾಣುವ ಸಂದರ್ಭದಲ್ಲಿ ಅವರ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಯಾವುದೇ ಜಾತಿ ಜನಾಂಗಕ್ಕೆ ಸೀಮಿತವಾಗದೇ ಸರ್ವರಿಗೂ ಪ್ರಿಯವಾದ ಸಂವಿಧಾನ ರಚಿಸಿದ ಕೀರ್ತಿ ಬಾಬಾ ಸಾಹೇಬರಿಗೆ ಸಲ್ಲುತ್ತದೆ ಎಂದರು.
ಕೋರಣೇಶ್ವರ ಸ್ವಾಮಿಜಿ ಜ್ಯೋತಿ ಬೆಳಗಿಸಿದರು. ದತ್ತಾತ್ರೇಯ ಕೋಚಿ, ಕಲ್ಯಾಣಿ ಪವಾರ, ಧರ್ಮಣ್ಣ ಘೋರ್ಶೆ ಬುದ್ಧ ಬಸವ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜೈಭೀಮ್ ಮೇಲಿನಕೇರಿ ನೀಲಿ ಧ್ವಜಾಹರೋಹಣ ನೆರವೇರಿಸಿದರು. ಸೋನುಬಾಯಿ ತಳಕೇರಿ ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ಶಿವಯೋಗಿ ತಳಕೇರಿ ಅಧ್ಯಕ್ಷತೆ ವಹಿಸಿದ್ದರು. ಶರಣಮ್ಮ ಡಿ ಘೋರ್ಶೆ, ಪಿಡಿಒ ಸಂಜಯಕುಮಾರ ಸಕ್ಕರಗಿ, ಶರಣಬಸಪ್ಪ ಕಡಗಂಚಿ, ದಯಾನಂದ ಶೇರಿಕಾರ, ಮಾಜಿ ಜಿಪಂ ಸದಸ್ಯ ಸಿದ್ದಾರಾಮ ಪ್ಯಾಟಿ ಮಾತನಾಡಿದರು. ಚನ್ನವೀರ ಕಾಳೆಕಿಂಗೆ ಇದ್ದರು. ಮಹೇಶ ಕೋಚಿ ನಿರೂಪಿಸಿದರು. ದೀಲಿಪ ಕೋಚಿ ಸ್ವಾಗತಿಸಿದರು. ಅರವಿಂದ ಡಿ ರುದ್ರವಾಡಿ ವಂದಿಸಿದರು.