ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ
ಬೆಂಗಳೂರು: ಚಿತ್ರರಂಗದಲ್ಲಿ ಸೇವೆ ಸಲ್ಲಿಸುವ ಕುಟುಂಬಗಳ ಆರೋಗ್ಯ ಸಂರಕ್ಷಣೆಗಾಗಿ ಕರ್ನಾಟಕ ಚಲನಚಿತ್ರ ಮಂಡಳಿ ಹಾಗೂ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಕೆಎಫ್‌ಸಿಸಿ ಆವರಣದಲ್ಲಿ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.
ಆರೋಗ್ಯ ಸಚಿವ ಡಾ.ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗರೆಡ್ಡಿ, ನಟಿಯರಾದ ಪೂಜಾಗಾಂಧಿ, ರಾಗಿಣಿ ದ್ವಿವೇದಿ, ನೇಹಾ ಸೆಕ್ಸೇನಾ ಅತಿಥಿಗಳಾಗಿ ಆಗಮಿಸಿ ಆರೋಗ್ಯ ಶಿಬಿರ ಉದ್ಘಾಟಿಸಿದರು. ಚಲನಚಿತ್ರರಂಗದ ನಟ,ನಟಿಯರು,ತಂತ್ರಜ್ಙರ ಕುಟುಂಬದ ಸದಸ್ಯರು ಸರತಿ ಸಾಲಿನಲ್ಲಿ ನಿಂತು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆರೋಗ್ಯವೆಂಬುದು ಬಹುಮುಖ್ಯ ಪಾತ್ರವಹಿಸುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕಾದದ್ದು ಅತ್ಯಗತ್ಯ ಎಂದು ಆರೋಗ್ಯ ಸಚಿವ ಡಾ.ದಿನೇಶ್ ಗುಂಡೂರಾವ್ ತಿಳಿಸಿದರು.
ಜೀವನಶೈಲಿ, ಆಹಾರ, ಅಸಮತೋಲನದಿಂದ ಅತಿ ಚಿಕ್ಕವಯಸ್ಸಿನಲ್ಲೆ ರಕ್ತದೊತ್ತಡ,ಮಧುಮೇಹ ಬರುತ್ತಿದೆ. ಮಾಲಿನ್ಯದಿಂದಾಗಿ ಪರಿಸರ ಕಲುಷಿತಗೊಂಡು ಗಂಭೀರ ಆರೋಗ್ಯ ಸಮಸ್ಯೆ ತಲೆದೋರಿತ್ತಿದೆ. ಇದರ ಬಗ್ಗೆ ಜಾಗೃತಿ ಅರಿವು ಅಗತ್ಯ.
ಯಾವುದೇ ಖಾಯಿಲೆಗಳನ್ನು ಮೊದಲೆ ಗುರುತಿಸಿದಾಗ ನಿಯಂತ್ರಣಕ್ಕೆ ತಂದು ಜಾಗೃತರಾಗಬಹುದು.ಹೀಗಾಗಿ, ಪ್ರತಿ ವರ್ಷ ಇಂತಹ ಆರೋಗ್ಯ ಶಿಬಿರ ಆಯೋಜಿಸುವುದು ಅತ್ಯಗತ್ಯ.ಸರ್ಕಾರ ಸದಾ ನಿಮ್ಮೊಂದಿಗಿದೆ. ಚಲನಚಿಂತ್ರರಂಗಕ್ಕೆ ಸರ್ಕಾರದಿಂದ ಸಿಗಬಹುದಾದ ಸೌಲಭ್ಯ ಒದಗಿಸಲು ಬದ್ಧ ಎಂದರು.
ಮಧುಮೇಹ ಬಿ.ಪಿ ಕಂಪ್ಯೂಟರ್ ಮೂಲಕ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆ ಹೃದಯರೋಗ ತಪಾಸಣೆ, ಇ.ಸಿ.ಜಿ, ಮೂಳೆ ರೋಗ, ಕಿವಿ ಗಂಟಲು ಮೂಗು ಪರೀಕ್ಷೆ, ಚರ್ಮ ರೋಗ, ದಂತ ಪರೀಕ್ಷೆ, ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಗರ್ಭಕೋಶದ ಪರೀಕ್ಷೆ ಶಸ್ತ್ರಚಿಕಿತ್ಸೆ (ಸ್ಕ್ಯಾನಿಂಗ್ ರಿಪೋರ್ಟ್ ಇದ್ದಲ್ಲಿ ತರತಕ್ಕದ್ದು). ಪೈಲ್ಸ್, ಹರ್ನಿಯಾ, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲು, ಈ ಶಸ್ತ್ರಚಿಕಿತ್ಸೆಗಳ ಸಲಹೆ ಸೇರಿದಂತೆ ಸ್ವಯಂಪ್ರೇರಿತ ರಕ್ತದಾನ ಶಿಬಿರ, ನೇತ್ರದಾನ ನೊಂದಣಿ ಮಾಡಲಾಯಿತು.
ಈ ವೇಳೆ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್, ಉಪಾಧ್ಯಕ್ಷರಾದ ಪ್ರಮಿಳಾ ಜೋಷಾಯಿ, ವೆಂಕಟೇಶ್, ಎಂ.ನರಸಿಂಹಲು, ಗೌ.ಕಾರ್ಯದರ್ಶಿಗಳಾದ ಭಾ.ಮಾ.ಗಿರೀಶ್, ಕರಿಸುಬ್ಬು, ಡಾ.ಆರ್.ಸುಂದರರಾಜ್, ಖಜಾಂಚಿ ಜಯಸಿಂಹ ಮುಸರಿ ಸೇರಿದಂತೆ ಇನ್ನಿತರರಿದ್ದರು.