ವಿದ್ಯಾರ್ಥಿಗಳು ಶ್ರಮದಾನದಲ್ಲಿ ನಂಬಿಕೆ ಇಡಬೇಕು : ಡಾ. ರವೀಂದ್ರ ಗಬಾಡೆ
ಬೀದರ್: ಜೂ.9:ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮುಖಾಂತರ ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸೇವಾ ಮನೋಭಾವನೆ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೊಯ್ಯುತ್ತದೆ ಎಂದು ಬೀದರ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ರವೀಂದ್ರ ಗಬಾಡೆ ತಿಳಿಸಿದರು.
ಬೀದರ್ ವಿಶ್ವವಿದ್ಯಾಲಯ ಬೀದರ, ಕರ್ನಾಟಕ ಕಾಲೇಜು ಬೀದರ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಎನ್.ಎಸ್.ಎಸ್. ಶಿಬಿರದಿಂದ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ಸೇವಾ ಮನೋಭಾವ ಬೆಳೆಯುವುದರ ಜೊತೆಗೆ ದೇಶಭಕ್ತಿ ಮನದಲ್ಲಿ ಹಾಸು ಹೊಕ್ಕಾಗುವಂತೆ ಸಂಸ್ಕಾರ ನೀಡುತ್ತದೆ. ಪ್ರತೀ ಮನೆಯಲ್ಲಿ ಗಿಡಮರಗಳನ್ನು ನೆಟ್ಟು ನಗರವನ್ನು ಹಚ್ಚ ಹಸಿರಾಗುವಂತೆ ಮಾಡಬೇಕೆಂದು ಸಲಹೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಡಾ. ದಿಲೀಪ ಮಾಲೆ ಮಾತನಾಡಿ ನಮ್ಮ ಕಾಲೇಜು ಹಲವು ವರ್ಷಗಳಿಂದ ಎನ್.ಎಸ್.ಎಸ್.ಶಿಬಿರ ನಡೆಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸುವ ಜೊತೆಗೆ ಶ್ರಮದಾನ ಮಾಡುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ಮಾತನಾಡಿ ಅಧಿಕಾರಿಗಳು ಈ ಏಳು ದಿವಸಗಳ ವಿಶೇಷ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಶ್ರಮದಾನದ ಜೊತೆಗೆ ದೇಶಭಕ್ತಿ, ಸಂಸ್ಕøತಿ, ಸಂಸ್ಕಾರ ನಾಡು ನುಡಿಯ ಬಗ್ಗೆ ಹಾಗೂ ನೈತಿಕ ಮೌಲ್ಯಗಳು, ಸಾಮಾಜಿಕ ಕಳಕಳಿ ಹಾಗೂ ಸ್ವಚ್ಛತೆ ಶಿಸ್ತಿನ ಅರಿವು ಮೂಡಿಸಬೇಕೆಂದರು.
ಕರಾಶಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ ಮಾತನಾಡಿದರು. ಶಿಬಿರಾರ್ಥಿ ಪವನ್ ನಿರೂಪಿಸಿದರು. ಎನ್.ಎಸ್.ಎಸ್ ಅಧಿಕಾರಿ ಡಾ. ದಿಲೀಪ ಸ್ವಾಗತಿಸಿದರು. ಕು. ವೈಷ್ಣವಿ, ದಿವ್ಯಾ ಎನ್.ಎಸ್.ಎಸ್. ಗೀತೆ ಹಾಡಿದರು. ಆನಿ ಕ್ರಿಸ್ಟಿನಾ ವಂದಿಸಿದರು. ಈ ಉದ್ಘಾಟನೆ ಸಮಾರಂಭದಲ್ಲಿ ಸೋಮನಾಥ ಬಿರಾದಾರ, ದೈಹಿಕ ನಿರ್ದೇಶಕ ಡಾ. ಮಾದಯ್ಯ ಸ್ವಾಮಿ, ಗ್ರಂಥಪಾಲಕ ಡಾ. ಸೋಮನಾಥ ಮುದ್ದಾ, ಎನ್.ಎಸ್.ಎಸ್. ಸಹಾಯಕ ಮಧುಸೂದನ, ಪರಮೇಶ್ವರ ಡಿ., ಮಹೇಶ್ವರಿ, ಜ್ಯೋತಿ ರಾಂಪುರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.